ಜಿಲ್ಲೆ

ಸಿಎಂಗೆ ಐಟಿ ಕಂಪನಿಗಳಿಂದ ಶಾಕಿಂಗ್​ ಪತ್ರ! ಬೆಂಗಳೂರನ್ನು ತೊರೆಯಲು ಐಟಿ ಕಂಪನಿಗಳ ನಿರ್ಧಾರ?

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿಂದ ಐಟಿ ಕಂಪನಿಗಳು ವಲಸೆ ಹೋಗುವುದಾಗಿ ಎಚ್ಚರಿಕೆ ನೀಡಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೊರವರ್ತುಲ ರಸ್ತೆಗಳ ಕಂಪನಿಗಳ ಅಸೋಸಿಯೇಷನ್​ನಿಂದ​ ಪತ್ರ ಬರೆದು, ಬೆಂಗಳೂರಿಂದ ಐಟಿ ಕಂಪನಿಗಳು ಅನಿವಾರ್ಯವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತೆ. ಹೂಡಿಕೆ ವಾಪಸ್​ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ.

ಆ.30ರಂದು ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿತ್ತು. ಮಳೆಯ ಪರಿಣಾಮ ಐಟಿ ಕಂಪನಿಗಳ ಒಳಭಾಗದಲ್ಲಿ ನೀರು ಬಂದಿತ್ತು. ಐದು ಗಂಟೆ ಕಾಲ ಹೊರವರ್ತುಲ ರಸ್ತೆಯಲ್ಲಿ ಟೆಕ್ಕಿಗಳು ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿದ್ದರು. ಇವೆಲ್ಲದರ ಪರಿಣಾಮ ಒಂದೇ ದಿನ 255 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ಈ ಹೊರವರ್ತುಲ ರಸ್ತೆಯ ಕಳಪೆ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಮಳೆ ಬಂದಾಗ ಆಗುವ ಅವಾಂತರ ಹೆಚ್ಚುತ್ತಲೇ ಇದೆ. ಇದರಿಂದ ಕಂಪನಿಗಳಿಗೆ ತೀರಾ ನಷ್ಟವಾಗುತ್ತಿದೆ ಎಂದು ಐಟಿ ಅಸೋಸಿಯೇಷನ್​ ಪತ್ರ ಬರೆದಿದೆ.

ಶೇ.32% ಬೆಂಗಳೂರಿನ ಆದಾಯದ ತೆರಿಗೆ ಈ ಭಾಗದ ಐಟಿ ಕಂಪನಿಗಳು ಪಾವತಿ ಮಾಡುತ್ತಿವೆ. ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆ.ಆರ್​.ಪುರಂವರೆಗೆ 17 ಕಿ.ಮೀ. ಅಂತರದಲ್ಲಿ ಅನೇಕ ಐಟಿ ಕಂಪನಿಗಳಿವೆ. ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ.

2019ರಲ್ಲಿ ಸಿಎಂ ಭೇಟಿ ನೀಡಿ ಹೊರವರ್ತುಲ ಅಭಿವೃದ್ಧಿ ಬಗ್ಗೆ ಭರವಸೆ ಕೊಟ್ಟಿದ್ದರು. ಇದುವರೆಗೆ ಅದು ಈಡೇರಿಲ್ಲ ಎಂದು ಆಕ್ರೋಶ ಹೊರಹಾಕಲಾಗಿದೆ. ಐಟಿ ಕಾರಿಡಾರ್​ನಲ್ಲಿ ಯಾವ ಮೂಲಭೂತ ಸೌಕರ್ಯಗಳ ಕೊಡಲಾಯಿತು? ಎಂಬುದರ ಬಗ್ಗೆ ಮಾಹಿತಿ ಕೊಡಿ ಎಂದು ಆಗ್ರಹಿಸಲಾಗಿದೆ.

ಸಂಚಾರ ದಟ್ಟಣೆ ನಿರ್ವಹಣೆಗೆ ತೆಗೆದುಕೊಂಡ ಕ್ರಮ ಯಾವುದು? ದೀರ್ಘಕಾಲಿಕ, ತಾತ್ಕಾಲಿಕವಾಗಿ ಯಾವ ರೀತಿಯ ಕ್ರಮಗಳು ಆಗಿದೆ? ಎಂದು ಪ್ರಶ್ನಿಸಿರುವ ಐಟಿ ಅಸೋಸಿಯೇಷನ್​, ಸಮಸ್ಯೆಗಳಿಗೆ ಬ್ರೇಕ್​ ಹಾಕದಿದ್ದಲ್ಲಿ ಐಟಿ ಕಂಪನಿಗಳು ಅನಿವಾರ್ಯವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತೆ. ಬಂಡವಾಳ ಹೂಡಿಕೆ ವಾಪಸ್​ ತೆಗೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದೆ.

ಒಂದು ವೇಳೆ ಐಟಿ ಕಂಪನಿಗಳು ಹೊರ ಹೋದರೆ ಬೆಂಗಳೂರಿನ ಆರ್ಥಿಕತೆಗೆ ಬಹುದೊಡ್ಡ ಹೊಡೆತ ಬೀಳುವುದಂತೂ ಸತ್ಯ.