ಜಿಲ್ಲೆ

ಶಶಿಕಲಾ ಜೊಲ್ಲೆ ಆಸ್ತಿ ಮೇಲೆ ಶಿವಸೇನೆ ದಾಳಿ: ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ತಡೆದು ಪುಂಡಾಟ

arunakunigal

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಎಂಇಎಸ್​, ಶಿವಸೇನೆ ಕೃತ್ಯ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೆ, ಅತ್ತ ಎಂಇಎಸ್​ ಮತ್ತು ಶಿವಸೇನೆಯ ಪುಂಡಾಟಿಕೆ ಮುಂದುವರಿದಿದೆ. ಸಚಿವೆ ಶಶಿಕಲಾ ಜೊಲ್ಲೆ ದಂಪತಿಗೆ ಸೇರಿದ ಮನೆ ನಿರ್ಮಾಣ ಕಾಮಗಾರಿಯನ್ನು ತಡೆದು ಶಿವಸೇನೆ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಶಾಹುನಾಕಾ ಬಳಿ ಸಚಿವೆ ಶಶಿಕಲಾ ಜೊಲ್ಲೆ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿಗೆ ಬಂದ ಶಿವಸೇನೆ ಕಾರ್ಯಕರ್ತರು, ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯನ್ನು ತಡೆದು, ಕರ್ನಾಟಕದಲ್ಲಿ ಛತ್ರಪತಿ ಶಿವಾಜಿಗೆ ಅಪಮಾನ ಮಾಡಿದ್ದಾರೆ. ಕಾಮಗಾರಿ ನಡೆಸಲು ಬಿಡಲ್ಲ ಎಂದು ಅವಾಜ್ ಹಾಕಿದ್ದಾರೆ.

ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಎಂಇಎಸ್​, ಶಿವಸೇನೆ ಕೃತ್ಯ ಖಂಡಿಸಿ ರಾಜಕೀಯ ನಾಯಕರು, ಸಿನಿಮಾ ತಾರೆಯರು, ಕನ್ನಡಪರ ಸಂಘಟನೆಗಳು ಸೇರಿ ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಯಣ್ಣ ಮೂರ್ತಿ ಭಗ್ನ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಎಂಇಎಸ್​ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡಿಗರಿಗೆ ತೊಂದರೆ ಕೊಡುತ್ತಿರುವುದಕ್ಕೆ ತಡೆಯೊಡ್ಡಬೇಕು. ಅವರ ರಣೆಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹಿಸುತ್ತಾ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ. (ದಿಗ್ವಿಜಯ ನ್ಯೂಸ್​)