ಬೆಳಗಾವಿ: ವಿಧಾನಸಭೆ ಕಲಾಪ ಎಂದ ಮೇಲೆ ಅಲ್ಲೊಂದಿಷ್ಟು ಸ್ವಾರಸ್ಯಕರ ಮಾತು ಇರಬೇಕು, ಗಂಭೀರ ವಿಷಯವನ್ನು ಸರ್ಕಾರಕ್ಕೆ ಅರ್ಥ ಮಾಡಿಸಲು ಅಥವಾ ಚುಚ್ಚಿಯಾಡಲು ಶಾಸಕರು ಕಸರತ್ತು ಮಾತನಾಡುತ್ತಲೇ ಇರುತ್ತಾರೆ. ಸೋಮವಾರ ಕಲಾಪದಲ್ಲಿ ಜೆಡಿಎಸ್ನ ಶಿವಲಿಂಗೇಗೌಡ ಅವರು ಗಂಭೀರ ವಿಚಾರವನ್ನು ಸರ್ಕಾರಕ್ಕೆ ಮನಮುಟ್ಟುವಂತೆ ತಿಳಿಸಲು ಸಣ್ಣ ಪದ ಪ್ರಯೋಗ ಮಾಡಿದ್ದು ಗಮನ ಸೆಳೆಯಿತು.
ಪಶು ಆಸ್ಪತ್ರೆಗಳ ವೈದ್ಯರ ಕೊರತೆ ಬಗ್ಗೆ ಚರ್ಚೆಯಾಗುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಶಿವಲಿಂಗೇಗೌಡ, ಇಂದು ಕರೊನಾ ಎಂದು ನಗರದ ಜನ ಹಳ್ಳಿಗಳಿಗೆ ಬಂದು ದುಡಿಮೆಗಾಗಿ ಹೈನುಗಾರಿಕೆ ಅವಲಂಬಿಸುತ್ತಿದ್ದಾರೆ. 50 ಸಾವಿರ ರೂ. ಕೊಟ್ಟು ಸಿಂಧಿ ಹಸು ತಂದರೆ ಮೂರು ದಿನವೂ ನೆಟ್ಟಗಿರಲ್ಲ. ಈ ಸಿಂಧಿ ಹಸುಗಳಿಗೆ ಸೂಜಿಯನ್ನು ಹಿಂದಿನಿಂದ ಇಟ್ಟುಕೊಂಡಿರಬೇಕು. ಅದೊಂತರ ಮುಟ್ಟಿದರೆ ಮುನಿಯ ರೀತಿ ಎಂದರು. ಪಶು ವೈದ್ಯರಿಗೆ ತಕ್ಷಣ ನೆರವಾಗಿ ಎಂದು ಪಶುಸಂಗೋಪನೆ ಸಚಿವರನ್ನು ಇದೇ ವೇಳೆ ಅವರು ಒತ್ತಾಯಿಸಿದರು.