ಎಚ್.ಡಿ.ಕೋಟೆ: ಪಟ್ಟಣದ ಡ್ರೈವರ್ ಕಾಲನಿ ಸಮೀಪದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಚಿರತೆಯೊಂದು ಮಂಗಳವಾರ ಮುಂಜಾನೆ ಸೆರೆಯಾಗಿದೆ. ಒಂದು ತಿಂಗಳ ಅವಧಿಯಲ್ಲಿ ಒಟ್ಟು ಐದು ಚಿರತೆಗಳು ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿವೆ.
ಏಳು ವರ್ಷದ ಗಂಡು ಚಿರತೆ ಬೆಳಗಿನ ಜಾವ ಸೆರೆಯಾಗಿದ್ದು ಚಿರತೆ ನೋಡಲು ಸಾರ್ವಜನಿಕರು ಗುಂಪುಗುಂಪಾಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಒಟ್ಟು ಐದು ಚಿರತೆಗಳು ಬೋನಿಗೆ ಸೆರೆಯಾಗಿದ್ದು ಮತ್ತಷ್ಟು ಚಿರತೆಗಳು ಇರಬಹುದು ಎಂದು ಪಟ್ಟಣದ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ನಾಲ್ಕು ಚಿರತೆಗಳು ಸೆರೆಯಾದಾಗ ಅರಣ್ಯ ಇಲಾಖೆ ಬೋನಿನೊಳಗೆ ಸಾಕು ನಾಯಿಯನ್ನು ಕಟ್ಟಿತ್ತು. ಆದರೆ ಮಂಗಳವಾರ ಚಿರತೆ ಬೋನಿಗೆ ಸೆರೆಯಾದ ಸಂದರ್ಭದಲ್ಲಿ ನಾಯಿಯನ್ನು ಕಟ್ಟಿ ಹಾಕಿರಲಿಲ್ಲ ಆದರೂ ನಾಯಿ ವಾಸನೆಗೆ ಚಿರತೆ ಬೋನಿಗೆ ಬಂದು ಸೆರೆಯಾಗಿದೆ.
ಪಟ್ಟಣದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿ ರೈತರ ಜಮೀನುಗಳಲ್ಲಿ ಹಾಗೂ ವಾಸದ ಮನೆಗಳಲ್ಲಿ ಸಾಕುಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದು ಚಿರತೆಗಳನ್ನು ಸೆರೆ ಹಿಡಿಯಲು ಕಳೆದ ಒಂದು ತಿಂಗಳ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಇಲಾಖೆ ಚಿರತೆಗಳನ್ನು ಸೆರೆಹಿಡಿಯಲು ಬೋನು ಇರಿಸಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳು ರೈತ ಗುರುಮಲ್ಲು ಅವರ ಜಮೀನಿನಲ್ಲಿ ಬೋನು ಇರಿಸಲಾಗಿ ಸೆ.25 ರಂದು ಬೆಳಗಿನ ಜಾವ ಏಳು ವರ್ಷದ ಗಂಡು ಚಿರತೆ ಸೆರೆಯಾಗಿತ್ತು, ಅ.4 ರಂದು ಏಳು ವರ್ಷದ ಗಂಡು ಚಿರತೆ ಸೆರೆಯಾಗಿತ್ತು, ಅ.16 ರಂದು ಎಂಟು ವರ್ಷದ ಚಿರತೆ, ಅ.22ರಂದು ಮೂರು ವರ್ಷದ ಚಿರತೆ ಸೆರೆಯಾಗಿತ್ತು.
ಸೆರೆಯಾದ ಚಿರತೆಗಳನ್ನು ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಆರ್‌ಎಫ್‌ಒ ಪೂಜಾ, ಡಿಆರ್‌ಎಫ್‌ಒ ಪರಮೇಶ್ ಹಾಗೂ ಸಿಬ್ಬಂದಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲು ತಯಾರಿ ನಡೆಸಿದರು.
ಗ್ರಾಮಸ್ಥರ ದಾಂಗುಡಿ: ಐದನೇ ಚಿರತೆ ಸೆರೆಯಾದ ವಿಚಾರ ತಿಳಿದು ಎಚ್.ಡಿ.ಕೋಟೆ ಪಟ್ಟಣ ಸೇರಿದಂತೆ ಅಕ್ಕಪಕ್ಕದ ನೂರಾರು ಗ್ರಾಮಸ್ಥರು ಅದನ್ನು ನೋಡಲು ಸ್ಥಳಕ್ಕೆ ದಾಂಗುಡಿ ಇಟ್ಟರು. ಬೋನಿನಲ್ಲಿ ಸೆರೆಯಾಗಿ ಗರ್ಜಿಸುತ್ತಿದ್ದ ಚಿರತೆಯನ್ನು ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.