ಮುನಿರಾಜ ಆರ್. ವೇಮಗಲ್: ವೇಮಗಲ್&ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆ ಆಗಸ್ಟ್ 17ಕ್ಕೆ ನಿಗದಿಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಮುಖಂಡರಿಂದ ಸರಣಿ ಸಭೆಗಳು ನಡೆಯತೊಡಗಿದ್ದ್ದು, ಎಲ್ಲೆಲ್ಲೂ ಸರಣಿ ಸಭೆಗಳ ಸದ್ದು&ಗದ್ದಲ ಬಿರುಸಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು, ಕ್ಷೇತ್ರದ ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ಮಾಜಿ ಉಪ ಸಭಾಪತಿ ವಿ.ಆರ್.ಸುದರ್ಶನ್ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಪ್ರಥಮ ಚುನಾವಣೆ ಮೂಲಕ ಮೇಲುಗೈ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದ್ದಾರೆ. ಅಂತೆಯೇ, ಜೆಡಿಎಸ್&ಬಿಜೆಪಿ ಪಕ್ಷಗಳ ಮುಖಂಡರೂ ಶತಾಯಗತಾಯ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪಣತೊಟ್ಟಿದ್ದಾರೆ.
ಈಗಾಗಲೇ ಕಾಂಗ್ರೆಸ್ನಿಂದ ವಾರ್ಡ್ವಾರು ಸಭೆ ನಡೆಸುವ ಮೂಲಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ತಿಳಿಸಿ ಮತ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್ಗೆ ಸೆಡ್ಡು ಹೊಡೆಯಲು ಮುಂದಾಗಿರುವ ಮೈತ್ರಿ ಪಕ್ಷಗಳು ಸರ್ಕಾರದ ವೈಲ್ಯಗಳನ್ನು ಜನರ ಮುಂದಿಟ್ಟು ಗೆಲುವಿನ ಸೂತ್ರ ಉಪಯೋಗಿಸುತ್ತಿದ್ದಾರೆ. ಯಾರನ್ನು ಕಣಕ್ಕೆ ಇಳಿಸಿದರೆ ಗೆಲ್ಲಬಹುದು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಳೆದು ತೂಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ ಎಂಬ ಕಾತರದಲ್ಲಿ ಮತದಾರರಿದ್ದಾರೆ.
ಗೆಲುವಿಗೆ ಗ್ಯಾರಂಟಿ ಅಸ್ತ್ರ
ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. 2 ವರ್ಷ 3 ತಿಂಗಳಲ್ಲಿ ವೇಮಗಲ್ ಪಟ್ಟಣ ಪಂಚಾಯಿತಿ ಅಭಿವೃದ್ಧಿಗಾಗಿ ಬಿಡುಗಡೆಗೊಳಿಸಿರುವ ಅನುದಾನ, ರಸ್ತೆ, ಇಂದಿರಾ ಕ್ಯಾಂಟೀನ್ ಹೀಗೆ ಹಲವು ಕಾರ್ಯಕ್ರಮಗಳ ಪ್ರಯೋಗ ಬಳಕೆ ಮಾಡುತ್ತಿದ್ದಾರೆ. ವಿ.ಆರ್.ಸುದರ್ಶನ್ ನೇತೃತ್ವದಲ್ಲಿ ಚುನಾವಣೆಗೆ ಕಾಂಗ್ರೆಸ್ ಮುಂದಾಗಿದ್ದು, ತಳಮಟ್ಟದಿಂದ ಪಕ್ಷ ಸಂಟನೆ ಮೂಲಕ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತು ಆರಂಭವಾಗಿದೆ.
ಭಿನ್ನಾಭಿಪ್ರಾಯದ ಬಿಸಿ
ವೇಮಗಲ್ ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಬಹುತೇಕ ವಾರ್ಡ್ಗಳಲ್ಲಿದ್ದಾರೆ. ಜತೆಗೆ ಬಿಜೆಪಿ ಅಭ್ಯರ್ಥಿಗಳೂ ಇದ್ದಾರೆ. 15 ವಾರ್ಡ್ಗಳ ಪೈಕಿ ಎರಡೂ ಪಕ್ಷಗಳಿಗೆ ಎಷ್ಟು ವಾರ್ಡ್ಗಳು ಹಂಚಿಕೆಯಾಗುತ್ತವೆ ಎಂಬುದು ಪ್ರಶ್ನೆಯಾಗಿದೆ. ಎಲ್ಲ ವಾರ್ಡ್ಗಳಲ್ಲೂ ಉಭಯ ಪಕ್ಷಗಳಿಂದ ಅಭ್ಯರ್ಥಿಗಳು ಇದ್ದರೂ ಒಬ್ಬರಿಗೆ ಟಿಕೆಟ್ ಕೊಟ್ಟು, ಇನ್ನೊಬ್ಬರಿಗೆ ಕೊಡದಿದ್ದರೆ ಭಿನ್ನಾಭಿಪ್ರಾಯ ಸೃಷ್ಟಿಯಾಗುತ್ತದೆ. ತಲೆ ಬಿಸಿ ನಿವಾರಣೆಗೆ ಬಿಜೆಪಿ, ಜೆಡಿಎಸ್ ಸಮತೋಲನ ಪ್ರಕ್ರಿಯೆಗೆ ಮುಂದಾಗಿದೆ. ಮೈತ್ರಿಯಲ್ಲಿನ ಭಿನ್ನಾಭಿಪ್ರಾಯಗಳ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ.
ಮನವೊಲಿಸುವ ಯತ್ನ
ರಾಜಕೀಯ ಪಕ್ಷಗಳಿಂದ ಸರಣಿ ಸಭೆಗಳು ನಡೆದಂತೆ ಪ್ರತಿ ವಾರ್ಡ್ನಲ್ಲೂ ಆಕಾಂಗಳ ಪಟ್ಟಿಯೂ ಹೆಚ್ಚುತ್ತಿದೆ. ಇದು ಕೈಪಾಳಯದಲ್ಲಿ ತುಸು ಹೆಚ್ಚು ಎನ್ನಬಹುದು. ಟಿಕೆಟ್ ತಪ್ಪಿದ ಆಕಾಂ ಬೆಂಬಲವು ಯಾರಿಗೆ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ. ಆದ್ದರಿಂದ ಈಗಲೇ ಕೆಲವರನ್ನು ಮನವೊಲಿಸುವ ಪ್ರಯತ್ನವೂ ಶುರುವಾಗಿದೆ.
ಜೆಡಿಎಸ್&ಬಿಜೆಪಿಯಿಂದ ಪ್ರತ್ಯೇಕ ಸಭೆಗಳು
ಬಿಜೆಪಿ&ಜೆಡಿಎಸ್ ಈ ವಿಚಾರದಲ್ಲಿ ಒಂದಾಗದೆ ಪ್ರತ್ಯೇಕ ಸಭೆಗಳನ್ನು ನಡೆಸುತ್ತಿದ್ದಾರೆ. ಇದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.