ಜಿಲ್ಲೆ

ಬಿಎಂಟಿಸಿ ಬಸ್​ನಿಂದ ಸರಣಿ ಅಪಘಾತ

ಬೆಂಗಳೂರು: ಜಯನಗರದ ಈಸ್ಟ್ ಎಂಡ್ ಸರ್ಕಲ್ ಸಮೀಪ ಬಿಎಂಟಿಸಿ ವೋಲ್ವೋ ಬಸ್ ಅಡ್ಡಾದಿಡ್ಡಿ ಚಲಿಸಿ ಸರಣಿ ಅಪಘಾತ ಸಂಭವಿಸಿದ್ದು, ಐದು ವಾಹನಗಳು ಜಖಂಗೊಂಡಿವೆ.

ಶುಕ್ರವಾರ ಮಧ್ಯಾಹ್ನ 1 ಗಂಟೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್ ಮೆಜೆಸ್ಟಿಕ್​ನಿಂದ ಜಯನಗರ ಮಾರ್ಗವಾಗಿ ಎಚ್​ಎಸ್​ಆರ್ ಲೇಔಟ್​ಗೆ ತೆರಳುತ್ತಿದ್ದಾಗ ಈಸ್ಟ್ ಎಂಡ್ ಸರ್ಕಲ್ ಬಳಿಯ ರೆಡ್ಡಿ ನರ್ಸಿಂಗ್ ಹೋಂ ಮುಂಭಾಗದಲ್ಲಿ ಅಡ್ಡಾದಿಡ್ಡಿ ಚಲಿಸಿ ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ನಾಲ್ಕು ಕಾರುಗಳು ಸಂಪೂರ್ಣ ಜಖಂಗೊಂಡಿವೆ.

ಈ ಕುರಿತು ಸ್ಥಳೀಯರು ‘ನಮ್ಮ 100’ ಮೂಲಕ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದರು. ಜಖಂಗೊಂಡಿದ್ದ ವಾಹನಗಳನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅಪಘಾತದ ವೇಳೆ ಬಸ್ ಕಡಿಮೆ ವೇಗದಲ್ಲಿತ್ತು. ಹಾಗಾಗಿ ಭಾರಿ ದುರಂತ ತಪ್ಪಿದಂತಾಗಿದೆ. ಬಸ್​ನ ಬ್ರೇಕ್ ವೈಫಲ್ಯ ಆಗಿರುವುದು ಕಂಡುಬಂದಿಲ್ಲ. ಚಾಲಕನ ಅಜಾಗರೂಕತೆಯೇ ಅವಘಡಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಬಸ್ ಚಾಲಕ ಧಮೇಂದ್ರನನ್ನು ಬಂಧಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯ ಗೊಂಡಿದ್ದಾರೆ. ಬಿಎಂಟಿಸಿ ಮುಖ್ಯಸ್ಥರಿಗೆ ಮಾಹಿತಿ ನೀಡಿ ಬಸ್ ಜಪ್ತಿ ಮಾಡಲಾಗಿದೆ. ಈ ಸಂಬಂಧ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಾರದಲ್ಲಿ 2ನೇ ಅಪಘಾತ

ಜ.6ರ ಬೆಳಗ್ಗೆ 8.45ರಲ್ಲಿ ಕೊಟ್ಟಿಗೆಪಾಳ್ಯ ಬಸ್ ನಿಲ್ದಾಣದ ಸಮೀಪ ಬಿಎಂಟಿಸಿ ಬಸ್ ಬ್ರೇಕ್ ವೈಫಲ್ಯದಿಂದ ಸರಣಿ ಅಪಘಾತ ಸಂಭವಿಸಿತ್ತು. ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.