ಜಿಲ್ಲೆ

ಸಣ್ಣ ಕೈಗಾರಿಕೆಗೆ ಪ್ರತ್ಯೇಕ ನೀತಿ ಅಗತ್ಯ: ಎಫ್​​ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ

ಬೆಂಗಳೂರು: ಸಣ್ಣ ಕೈಗಾರಿಕೆ ಅಡಿಯಲ್ಲಿ ಬರುವ ಸೂಕ್ಷ್ಮ ಹಾಗೂ ಸಣ್ಣ ಉದ್ದಿಮೆಗೆ (ಎಂಎಸ್‌ಇ) ಪ್ರತ್ಯೇಕ ನೀತಿ ಹಾಗೂ ಪ್ರೋತ್ಸಾಹಕರ ಕಾರ್ಯಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಕಟಿಸಬೇಕು. ಇದರಡಿಯೇ ಮಹಿಳಾ ಉದ್ದಿಮೆದಾರರಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ಎಫ್​ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಆಗ್ರಹಿಸಿದರು.

ಪ್ರಸ್ತುತ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆ (ಎಂಎಸ್‌ಎಂಇ) ಮಾದರಿಯನ್ನು ಸರ್ಕಾರ ಮಾನ್ಯ ಮಾಡಿದೆ. ಆದರೆ, ಎಂಎಸ್‌ಎಂಇ ಅಡಿಯಲ್ಲಿ ಶೇ.97 ಘಟಕಗಳು ಸೂಕ್ಷ್ಮ ಹಾಗೂ ಸಣ್ಣ ಉದ್ದಿಮೆದಾರರೇ ಹೆಚ್ಚಿದ್ದು, ಉಳಿದ ಶೇ.3 ಮಾತ್ರ ಮಧ್ಯಮ ಪ್ರಮಾಣದವರಾಗಿದ್ದಾರೆ. ಸರ್ಕಾರ ನೀಡುತ್ತಿರುವ ಸವಲತ್ತಿನ ಹೆಚ್ಚಿನ ಭಾಗವು ಮಧ್ಯಮ ಗಾತ್ರ ಉದ್ದಿಮೆದಾರರಿಗೆ ಸಿಗುತ್ತಿದೆ. ಹಾಗಾಗಿ ಎಂಎಸ್‌ಇ ಸಚಿವಾಲಯ ಹಾಗೂ ನೀತಿಯನ್ನು ಪ್ರತ್ಯೇಕಗೊಳಿಸಿ ಉದ್ಯಮವನ್ನು ಬೆಳೆಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಎಂಎಸ್‌ಇ ಉದ್ಯಮವು 50 ಕೋಟಿ ರೂ. ಒಳಗಿನ ಮಿತಿಯೊಳಗೆ ಬರುತ್ತಾರೆ. ಮಧ್ಯಮ ಗಾತ್ರ ಉದ್ಯಮವು 500 ಕೋಟಿ ರೂ. ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸೂಕ್ಷ್ಮ ಹಾಗೂ ಸಣ್ಣ ಘಟಕಗಳನ್ನು ನಡೆಸುವವರಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಈ ಸಂಗತಿಯನ್ನು ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದು, ಮತ್ತೊಮ್ಮೆ ಪತ್ರ ಬರೆಯಲಾಗುವುದು. ರಾಜ್ಯ ಸರ್ಕಾರಕ್ಕೂ ನೀತಿ ಬದಲಿಸಿಕೊಳ್ಳಲು ಅವಕಾಶ ಇದೆ ಎಂದು ಅವರು ಪ್ರತಿಪಾದಿಸಿದರು.

ಸಾಲ ಯೋಜನೆ ಮರುಜಾರಿಯಾಗಲಿ:

ರಾಜ್ಯದಲ್ಲಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಈ ಹಿಂದೆ ಶೇ.4 ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲಾಗುತ್ತಿತ್ತು. ಇದರಿಂದ ವಾರ್ಷಿಕ ನೂರಾರು ಮಹಿಳೆಯರಿಗೆ ಅನುಕೂವಾಗಿತ್ತು. ಆದರೀಗ ಈ ಯೋಜನೆ ಸ್ಥಗಿತಗೊಂಡಿದ್ದು, ಬೇರೆ ಹೆಸರಿನಡಿ ಸೇವಾ ವಲಯಕ್ಕೆ ಸೀಮಿತಗೊಳಿಸಲಾಗಿದೆ. ಹೆಚ್ಚಿನ ಮಹಿಳಾ ಉದ್ದಿಮೆದಾರರು ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದರಿಂದ ಹಳೆಯ ಯೋಜನೆಯನ್ನು ಪುನಾರಂಭಿಸಬೇಕು. ಜತೆಗೆ ಕನಕಪುರದ ಹಾರೋಹಳ್ಳಿ, ಕಲಬುರಗಿ ಸಹಿತ 4 ಕೈಗಾರಿಕಾ ಪಾರ್ಕ್‌ಗಳಲ್ಲಿ ಮಹಿಳಾ ಉದ್ಯಮಿಗಳಿಗೆ ಶೇ.30 ಪ್ಲಾಟ್ ನಿಗದಿ ಮಾಡಬೇಕು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಫ್​ಸಿಸಿಐ ಹಿರಿಯ ಉಪಾಧ್ಯಕ್ಷ ಟಿ,ಸಾಯಿರಾಮ್ ಪ್ರಸಾದ್ ಹಾಜರಿದ್ದರು.

ಕನಿಷ್ಠ ವೇತನ ನಗದಿಗೆ ಆತುರ ಬೇಡ:

ರಾಜ್ಯದಲ್ಲಿ ಕಾರ್ಮಿಕ ವರ್ಗಕ್ಕೆ ಚಾಲ್ತಿಯಲ್ಲಿರುವ ಕನಿಷ್ಠ ವೇತನವನ್ನು ಪರಿಷ್ಕರಣೆ ಕಾರ್ಯ ನಡೆದಿದೆ. ಹಾಲಿ 15 ಸಾವಿರ ರೂ. ಮೊತ್ತವನ್ನು ದುಪ್ಪಟ್ಟುಗೊಳಿಸಲು ಸರ್ಕಾರ ಮುಂದಾಗಿತ್ತು. ಅದನ್ನೀಗ 26 ಸಾವಿರ ರೂ. ಆಸುಪಾಸಿನಲ್ಲಿ ನಗದಿಗೆ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಉದ್ದಿಮೆದಾರರಿಗೆ ತೊಂದರೆ ಆಗಲಿದ್ದು, ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಷ್ಟವಾಗಲಿದೆ. ಕನಿಷ್ಠ ವೇತನದ ವಿಚಾರದಲ್ಲಿ ಸರ್ಕಾರ ಆತುರದ ನಿರ್ಧಾರ ಕೈಗೊಳ್ಳದಿರುವುದು ಉತ್ತಮ ಎಂದು ಉಮಾ ರೆಡ್ಡಿ ತಿಳಿಸಿದರು.

ಬೆಂಗಳೂರಿನಲ್ಲಿ ಮೂಲಸೌಕರ್ಯದ ಕೊರತೆ ಇರುವುದು ನಿಜ. ಅದರಲ್ಲೂ ಪೀಣ್ಯ ಸೇರಿ ಕೈಗಾರಿಕಾ ಪ್ರಾಂಗಣಗಳಲ್ಲಿ ಸಮಸ್ಯೆ ಜಾಸ್ತಿ ಇದೆ. ಉದ್ದಿಮೆದಾರರು, ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದ್ದು, ಸರಕು ಸಾಗಣೆಗೂ ತುಸು ಅಡ್ಡಿ ಎದುರಾಗಿದೆ. ಈ ವಿಚಾರವಾಗಿ ದನಿ ಎತ್ತಿರುವ ಕಿರಣ್ ಮುಜುಂದಾರ್ ಶಾ ನಿಲುವಿಗೆ ನಮ್ಮ ಬೆಂಬಲ ಇದೆ.

- ಉಮಾ ರೆಡ್ಡಿ, ಎಫ್​​ಕೆಸಿಸಿಐ ಅಧ್ಯಕ್ಷೆ