ಜಿಲ್ಲೆ

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಸುದೀರ್ಘ ಹೋರಾಟದ ಫಲ

ಮಂಜುನಾಥ ಎಸ್. ಅಂಗಡಿ ಧಾರವಾಡ

ಸಾಂಸ್ಕೃತಿಕ ನಗರಿ ಧಾರವಾಡ ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಒಂದುಗೂಡಿಸಿದ್ದು ಹು- ಧಾ ಮಹಾನಗರ ಪಾಲಿಕೆ. ಇವೆರಡೂ ಅವಳಿನಗರಗಳು ಆಡಳಿತಾತ್ಮಕವಾಗಿ ಪ್ರತ್ಯೇಕ ಆಗುತ್ತಿವೆ. ಕಾಂಗ್ರೆಸ್ ಸರ್ಕಾರ ಹೊಸ ವರ್ಷಾರಂಭದಲ್ಲಿ ಧಾರವಾಡಕ್ಕೆ ವಿಶೇಷ ಕೊಡುಗೆ ನೀಡಿದ್ದು, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಯಾಗಲಿದೆ.

ಧಾರವಾಡದ ಮಣ್ಣಿನ ಗುಣವೇ ಹಾಗೆ. ಇಲ್ಲಿನ ಜನ ಹೋರಾಟಕ್ಕೆ ನಿಂತರೆ ಬೇಡಿಕೆ ಈಡೇರುವವರೆಗೆ ವಿರಮಿಸುವವರಲ್ಲ. ಧಾರವಾಡ ಹೈಕೋರ್ಟ್ ಪೀಠ ಸ್ಥಾಪನೆ ಇದಕ್ಕೆ ನಿದರ್ಶನ. ಅದೇರೀತಿಯ ಮತ್ತೊಂದು ಹೋರಾಟದ ಫಲವಾಗಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗಾಗಿ ನಡೆದ ಸುದೀರ್ಘ ಹೋರಾಟ ಫಲ ನೀಡಿದೆ. `ಎಚ್‌ಡಿಎಂಸಿ' ಹೋಗಿ `ಡಿಎಂಸಿ' ರಚನೆ ಆಗಲಿದೆ. ಪ್ರತ್ಯೇಕ ಪಾಲಿಕೆಗಾಗಿ ಹಲವಾರು ಹೋರಾಟಗಳು ನಡೆದಿವೆ. 2021ರಲ್ಲಿ ಸಂಘಟಿತ ಹೋರಾಟಕ್ಕೆ ನಾಂದಿ ಹಾಡಿದ್ದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ. ಪದಾಽಕಾರಿಗಳು, ಸದಸ್ಯರು ನಿರಂತರವಾಗಿ ಸಂಸದರು, ಉಸ್ತುವಾರಿ ಸಚಿವರು, ಶಾಸಕರ ಮೇಲೆ ಒತ್ತಡ ಹೇರುತ್ತ ಬಂದರು. ಆರಂಭದಲ್ಲಿ ರಾಜಕೀಯ ಇಚ್ಛಾಶಕ್ತಿ ಮತ್ತು ದೂರದೃಷ್ಟಿಯ ಕೊರತೆಯಿಂದ ಯಾರೂ ಸ್ಪಂದಿಸಲಿಲ್ಲ.

ಈ ಹೋರಾಟಕ್ಕೆ ಧಾರವಾಡದ ಸಂಘ- ಸಂಸ್ಥೆಗಳು, ಸಾಹಿತಿಗಳು, ಕರ್ನಾಟಕ ವಿದ್ಯಾವರ್ಧಕ ಸಂಘ, ಮಹಿಳಾ ಸಂಘಟನೆಗಳು, ವಾಣಿಜ್ಯೋದ್ಯಮ ಸಂಘ, ವಕೀಲರ ಸಂಘಗಳು ಸಾಥ್ ನೀಡಿದವು. ವಿವಿಧ ಬಡಾವಣೆಗಳ ನಿವಾಸಿಗಳು ಬೀದಿಗಿಳಿದು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಧಾರವಾಡ ವ್ಯಾಪ್ತಿಯ ಪಾಲಿಕೆ ಸದಸ್ಯರು ಪಕ್ಷ ಭೇದ ಮರೆತು ಭಾಗವಹಿಸಿದರು. ಪಾಲಿಕೆಯ ವಿಭಜನೆಯ ಅನಿವಾರ್ಯತೆಯನ್ನು ಮನಗಂಡ ಸದಸ್ಯರು, ಪಾಲಿಕೆ ಸಭೆಯಲ್ಲಿ ಸರ್ವಾನುಮತದಿಂದ ವಿಭಜನೆಗೆ ಒಮ್ಮತದ ನಿರ್ಣಯ ಕೈಗೊಂಡರು.

1ರಿಂದ 26 ವಾರ್ಡ್ ಸೇರ್ಪಡೆ

ನೂತನ ಧಾರವಾಡ ಪಾಲಿಕೆಗೆ 1ರಿಂದ 26 ವಾರ್ಡ್ಗಳನ್ನು ಸೇರ್ಪಡೆಗೊಳಿಸುವ ಪ್ರಸ್ತಾವ ಇದೆ. 26 ವಾರ್ಡ್ಗಳಲ್ಲಿ 2011ರ ಜನಗಣತಿ ಪ್ರಕಾರ 2,75,339 ಜನಸಂಖ್ಯೆ ಹೊಂದಿದೆ. 2023ರ ಯೋಜಿತ ಜನಸಂಖ್ಯೆಯು 3,65,065 ಇದೆ. 26 ವಾರ್ಡ್ಗಳ ವಿಸ್ತೀರ್ಣ 120.94 ಚದರ ಕಿ.ಮೀ ಆಗಿದೆ. ಪ್ರತಿ ಚದರ ಕಿ.ಮೀ.ಗೆ 3,018 ಜನಸಾಂಧ್ರತೆ ಹೊಂದಿದೆ. ಧಾರವಾಡ ತಾಲೂಕಿನಲ್ಲಿ ಶೇ. 62.35 ಮತ್ತು ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಶೇ. 92.94 ಜನ ಕೃಷಿಯೇತರ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.