ಜಿಲ್ಲೆ

ದೃಶ್ಯಕಲಾ ವಿಭಾಗಕ್ಕೆ ಪ್ರತ್ಯೇಕ ಮಂಡಳಿ ಅಗತ್ಯ

ಅವಿನಾಶ್ ಜೈನಹಳ್ಳಿ

ದೃಶ್ಯಕಲಾ ವಿಭಾಗಗಳು ಮುಕ್ತವಾಗಿ ತನ್ನ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ದೃಶ್ಯಕಾವ್ಯ ಮಂಡಳಿಯ ಅವಶ್ಯಕವಿದೆ ಎಂದು ಎಂದು ದೃಶ್ಯ ಕಲಾವಿದ ಸುರೇಶ್ ಜೈರಾಮ್ ತಿಳಿಸಿದರು.

ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ(ಕಾವಾ) ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಪ್ರದರ್ಶನ ಸಮಾರಂಭದಲ್ಲಿ ಮಾತನಾಡಿದ ಅವರು, ಹೀಗೆ ಮಾಡುವುದರಿಂದ ಮಾತ್ರ ವಿಭಾಗ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಲು ಸಾಧ್ಯ. ಕಾಲೇಜಿನಲ್ಲಿ ಅವಶ್ಯಕತೆಗೆ ತಕ್ಕಷ್ಟು ಪ್ರಾಧ್ಯಾಪಕರಿಲ್ಲ. ಇದರಿಂದ ವಿದ್ಯಾರ್ಥಿಗಳಲ್ಲಿಯೂ ಆಸಕ್ತಿ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೃಶ್ಯ ಕಲೆಗಳು ಅಳಿವಿನಂಚಿಗೆ ತಲುಪಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತಹ ಕೆಲಸಗಳು ನಡೆಯಬೇಕಿದೆ. ಎಷ್ಟೇ ಕುಂದುಕೊರತೆಗಳಿದ್ದರೂ ಕಾವಾ ತನ್ನ ಚಟುವಟಿಕೆಗಳ ಮೂಲಕ ನಾಡಿನ ಗಮನ ಸೆಳೆಯುತ್ತಿದೆ ಎಂದು ಹೇಳಿದರು.

ನಮ್ಮ ಶಿಕ್ಷಣ ವ್ಯವಸ್ಥೆಯ ಪಾಲಿಸಿಗಳು ಬದಲಾಗದ ಹೊರತು ಏನೂ ಮಾಡಲು ಸಾಧ್ಯವಿಲ್ಲ. ಕಣ್ಮರೆಯಾಗುತ್ತಿರುವ ಕಲೆಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಇದೊಂದು ಸಾಮೂಹಿಕ ಜವಾಬ್ದಾರಿಯಾಗಿದೆ. ಆದ್ದರಿಂದ ಎಲ್ಲರೂ ಈ ಬಗ್ಗೆ ಧ್ವನಿ ಎತ್ತಬೇಕಿದೆ ಎಂದು ಸಲಹೆ ನೀಡಿದರು. ದೃಶ್ಯಕಲಾವಿದರಾದ ಹಿಂದು ಆಂಟೋನಿ, ಜಯಸಿಂಹ, ಸುರೇಖಾ ಇತರರಿದ್ದರು.

ಕಣ್ಮನ ಸೆಳೆವ ಕಲಾಕೃತಿ

ಕಾವಾ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಕೈಚಳಕದಿಂದ ಮೂಡಿಬಂದ ಕಲಾಕೃತಿಗಳು ಗ್ರಾಮೀಣ ಬದುಕಿನ ಸ್ಥಿತಿಗಳನ್ನು ಅನಾವರಣ ಮಾಡಿವೆ. ಎಲೆಗಳಿಂದ ಮಾಡಿರುವ ಕಲಾಕೃತಿ ನೋಡುಗರ ಗಮನ ಸೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಪುಟ್ಟ ಮಕ್ಕಳ ಕೈಗೂ ಸ್ಮಾರ್ಟ್‌ಫೋನ್ ಸಿಕ್ಕಿರುವ ಕಾರಣ ಹೊರಾಂಗಣ ಕ್ರೀಡೆಗಳಾದ ಕಬಡ್ಡಿ, ಕೆನಾನ್ ಬಸ್ಟರ್, ಮರಕೋತಿ ಆಟ, ಬಾಸ್ಕೆಟ್‌ಬಾಲ್, ಕ್ರಿಕೆಟ್‌ನಂತಹ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಈ ಕ್ರೀಡೆಗಳು ಮನುಷ್ಯ ಸಂಬಂಧಗಳನ್ನು ಒಗ್ಗೂಡಿಸುತ್ತವೆ. ಆದ್ದರಿಂದ ಮಕ್ಕಳು, ಯುವ ಸಮುದಾಯ ಮೊಬೈಲ್ ಗೀಳಿನಿಂದ ಹೊರಬಂದು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಾರುವ ದೃಶ್ಯಗಳು ನೋಡುಗರನ್ನು ಬಾಲ್ಯದ ನೆನಪುಗಳಿಗೆ ಕೊಂಡೊಯ್ಯುತ್ತವೆ.