ಜಿಲ್ಲೆ

ಶಿಸ್ತು ಮತ್ತು ಒಗ್ಗಟ್ಟಿನೊಂದಿಗೆ ಅಧ್ಯಾತ್ಮದ ಪ್ರಜ್ಞೆಯು ವಿದ್ಯಾರ್ಥಿಗಳಿಗೆ ಅಗತ್ಯ

ಮೈಸೂರು: ಶಿಸ್ತು ಮತ್ತು ಒಗ್ಗಟ್ಟಿನೊಂದಿಗೆ ಅಧ್ಯಾತ್ಮದ ಪ್ರಜ್ಞೆಯು ವಿದ್ಯಾರ್ಥಿಗಳಿಗೆ ಅಗತ್ಯ ಎಂದು ಎನ್‌ಸಿಸಿ ಮೈಸೂರು ವಿಭಾಗದ ಗ್ರೂಪ್ ಕಮಾಂಡರ್ ಕರ್ನಲ್ ರೋಹಿತ್ ಠಾಕೂರ್ ಹೇಳಿದರು.

2024ರ ಗಣರಾಜ್ಯೋತ್ಸವ, ರಾಷ್ಟ್ರಮಟ್ಟದ ಶಿಬಿರ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದ ಮೈಸೂರು ವಿಭಾಗದ ಎನ್‌ಸಿಸಿ ಕೆಡೆಟ್‌ಗಳಿಗೆ ನಗರದ ಸುತ್ತೂರು ಶಾಖಾ ಮಠದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರಾಷ್ಟ್ರೀಯ ಜೀವನದಲ್ಲಿ ಯುವ ಜನತೆಯ ಪಾತ್ರ ದೊಡ್ಡದು, ದೇಶದ ಅಭಿವೃದ್ಧಿಯಲ್ಲಿ ಯುವಜನತೆ ಹಲವು ನೆಲೆಗಳಲ್ಲಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಮೈಸೂರು

ಅಧ್ಯಾತ್ಮದ ಅನುಭವ ಜೀವನದಲ್ಲಿ ಸರಿ ತಪ್ಪುಗಳ ವಿವೇಚನೆ ಮಾಡುವುದಕ್ಕೆ ಸಹಕಾರಿ. ದೇಶವನ್ನು ಅಧ್ಯಾತ್ಮದ ಅನುಭವವು ಸದೃಢಗೊಳಿಸುತ್ತಾ ಬಂದಿದೆ. ದೇಶ ಕಟ್ಟುವ ನಿಟ್ಟಿನಲ್ಲಿ ಹಿರಿಯರ ಪರಿಶ್ರಮವಿದೆ. ಯುವಜನತೆ ಮತ್ತು ಎನ್‌ಸಿಸಿ ಕೆಡೆಟ್‌ಗಳು ಇದನ್ನು ಅರಿತು ಸದೃಢ ದೇಶಕಟ್ಟುವಲ್ಲಿ ಭವಿಷ್ಯದ ಹೆಜ್ಜೆಗಳ ಬಗ್ಗೆ ಚಿಂತಿಸಬೇಕು ಎಂದರು.

ದೇಶಪ್ರೇಮಿಗಳಿಂದ ಮಾತ್ರ ದೇಶದ ಸುಭದ್ರತೆ ಸಾಧ್ಯ. ಆದರೆ ಇಂದು ಸೇನೆಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಪರ್ಯಾಸ. ಈ ದಿಸೆಯಲ್ಲಿ ನಾವೆಲ್ಲ ಆಲೋಚಿಸಬೇಕಿದೆ ಎಂದು ಹೇಳಿದರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಎನ್‌ಸಿಸಿಯು ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿಯನ್ನು ಮತ್ತು ಶಿಸ್ತನ್ನು ಬೆಳಸುವ ಅತ್ಯುತ್ತಮ ಮಾಧ್ಯಮವಾಗಿದೆ. ದೇಶ ಮತ್ತು ಗುರು ಹಿರಿಯರ ಮೇಲೆ ಗೌರವ ಮತ್ತು ಭಕ್ತಿಯ ಭಾವ ಸಹಜವಾಗಿ ಮೂಡುವಂತೆ ಮಾಡುತ್ತದೆ. ಎನ್‌ಸಿಸಿಯಲ್ಲಿ ಎಲ್ಲ್ಲ ಮಟ್ಟದ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ, ಅತ್ಯುತ್ತಮವಾದ ಸಾಧನೆಗಳನ್ನು ಮಾಡಿ ವಿಶೇಷ ಅನುಭವಗಳನ್ನು ಮತ್ತು ಆತ್ಮವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ಇದು ಇತರ ವಿದ್ಯಾರ್ಥಿಗಳಿಗೆ ಪ್ರೇರಕವಾಗಲಿ. ಇದರಿಂದ ಅವರ ಶೈಕ್ಷಣಿಕ ಮತ್ತು ರಾಷ್ಟ್ರೀಯ ಜೀವನ ಉನ್ನತವಾಗಲಿದೆ. ನಮ್ಮ ದೇಶದ ಆಧ್ಯಾತ್ಮಿಕ ಸಂಪತ್ತು ದೊಡ್ಡದು. ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ ಭಾರತೀಯರಲ್ಲಿ ರಕ್ತಗತವಾಗಿರುತ್ತದೆ. ಅಧ್ಯಾತ್ಮದಲ್ಲಿ ಸಾಗಿದಾಗ ಎಲ್ಲರೂ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.

ಜೆಎಸ್‌ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿದರು. 75ನೇ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ 22 ಕೆಡೆಟ್‌ಗಳನ್ನು ಒಳಗೊಂಡಂತೆ ಶಿಬಿರ, ಭೂ, ಜಲ ಮತ್ತು ವಾಯು ಸೈನಿಕ ಶಿಬಿರಗಳಲ್ಲಿ ಭಾಗವಹಿಸಿದ 69 ಶಿಬಿರಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಅಭಿನಂದಿತ ಕೆಡೆಟ್‌ಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.