ಉಡುಪಿ: ಸೆಲ್ಫಿ ಗೀಳಿಗೆ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನೆ ಮಲ್ಪೆ ಸೇಂಟ್ ಮೇರೀಸ್ ದ್ವೀಪದಲ್ಲಿ ಸೋಮವಾರ ಸಂಭವಿಸಿದೆ. 10 ದಿನಗಳ ಅಂತರದಲ್ಲಿ ಒಟ್ಟು ಐವರು ಸೆಲ್ಫಿಗೆ ಬಲಿಯಾಗಿದ್ದಾರೆ.
ಹಾವೇರಿಯ ಸತೀಶ್ ನಂದಿಹಳ್ಳಿ(21) ಮತ್ತು ಬಾಗಲಕೋಟೆಯ ಸತೀಶ್ ಕಲ್ಯಾಣ್ ಶೆಟ್ಟಿ (21) ಮೃತರು. ಬೆಂಗಳೂರು ಯಲಹಂಕದ ಜಿಕೆವಿಕೆ ಕೃಷಿ ವಿದ್ಯಾನಿಲಯದ 68 ವಿದ್ಯಾರ್ಥಿಗಳು ಮಲ್ಪೆ ಸೇಂಟ್ ಮೇರಿಸ್ಗೆ ಪ್ರವಾಸ ಬಂದಿದ್ದರು. ಇವರಲ್ಲಿ ಇಬ್ಬರು ಲೈಫ್ ಗಾರ್ಡ್ ಸಿಬ್ಬಂದಿಯ ಸೂಚನೆ ಮೀರಿ ಅಪಾಯಕಾರಿ ಸ್ಥಳದಲ್ಲಿ ಹಾಕಲಾದ ಕಬ್ಬಿಣದ ಪಟ್ಟಿಯನ್ನು ದಾಟಿ ಸಮುದ್ರ ತಟದಲ್ಲಿರುವ ಕಲ್ಲುಗಳ ಮೇಲೇರಿ ಮೊಬೈಲ್ ಫೋನ್ ಮೂಲಕ ಸೆಲ್ಫಿ ತೆಗೆಯಲು ಮುಂದಾದರು. ಈ ಸಂದರ್ಭ ಕಾಲು ಜಾರಿ ಸಮುದ್ರಕ್ಕೆ ಬಿದ್ದು, ಅಬ್ಬರದ ತೆರೆಯ ಹೊಡೆತಕ್ಕೆ ಕೊಚ್ಚಿ ಹೋದರು. \
ಜೀವರಕ್ಷಕ ತಂಡ ಸತೀಶ್ ನಂದಿಹಳ್ಳಿ ಅವರನ್ನು ರಕ್ಷಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ಮುಳುಗು ತಜ್ಞರ ಸತತ ಪ್ರಯತ್ನದ ಬಳಿಕ ಸತೀಶ್ ಕಲ್ಯಾಣ್ ಶೆಟ್ಟಿ ಮೃತದೇಹ ಸಾಯಂಕಾಲ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10 ದಿನಗಳ ಅಂತರದಲ್ಲಿ ಐವರು ಸಾವು!: ಮಲ್ಪೆ ಸಮುದ್ರ ತೀರಕ್ಕೆ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ಭೌಗೋಳಿಕ ಸ್ಥಿತಿಗತಿ ಅರಿಯದೆ ಲೈಫ್ ಗಾರ್ಡ್ ಸಿಬ್ಬಂದಿಯ ಸೂಚನೆಯನ್ನೂ ಪಾಲಿಸದೆ ಜೀವ ಕಳೆದುಕೊಳ್ಳುತ್ತಿದ್ದಾರೆ. 10 ದಿನಗಳ ಅಂತರದಲ್ಲಿ 5 ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಏ.7ರಂದು ಕೇರಳದ ಕೊಟ್ಟಾಯಂನ ಮಂಗಳಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಲ್ಪೆ ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಕ್ಕೆ ಬಂದು ಅಪಾಯಕಾರಿ ಪ್ರದೇಶದಲ್ಲಿ ಸೆಲ್ಫಿ ತೆಗೆಯಲು ಮುಂದಾಗಿ ಮೂವರು ನೀರುಪಾಲಾಗಿದ್ದರು. ಘಟನೆ ಮನಸ್ಸಿನಿಂದ ಮಾಸುವ ಮುನ್ನ ಮತ್ತೊಂದು ಅನಾಹುತ ಸಂಭವಿಸಿದೆ.