ಸರಸ್ವತಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವಪ್ರೇರಣಾ ಶಿಬಿರವನ್ನು ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್, ಲಕ್ಷ್ಮೀ ಉದ್ಘಾಟಿಸಿದರು. ಸೋಮಶೇಖರ್, ದಾಕ್ಷಾಯಿಣಿ, ಪ್ರಸಾದ್ ಇತರರಿದ್ದರು. 
ಜಿಲ್ಲೆ

ಮಹಿಳೆಯರಿಗೆ ಸ್ವಾವಲಂಬಿ ಜೀವನ ಗುರಿಯಾಗಬೇಕು

ಕಡೂರು: ಸ್ವಾವಲಂಬಿ ಬದುಕಿನೊಂದಿಗೆ ಶಿಸ್ತುಬದ್ಧ ಜೀವನ ಮಹಿಳೆಯರ ಗುರಿಯಾಗಬೇಕು ಎಂದು ಸರಸ್ವತಿಪುರ ಗ್ರಾಪಂ ಅಧ್ಯಕ್ಷ ಕಂಸಾಗರ ಸೋಮಶೇಖರ್ ತಿಳಿಸಿದರು.

ಸರಸ್ವತಿಪುರ ಗ್ರಾಮದ ಶನೈಶ್ಚರ ದೇವಾಲಯದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆದ ಸ್ವಪ್ರೇರಣಾ ಶಿಬಿರದಲ್ಲಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗುವುದರೊಂದಿಗೆ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬಲಿಷ್ಠರಾಗಲು ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಶಿಬಿರಗಳು ಹೆಚ್ಚು ಸಹಕಾರಿಯಾಗಲಿವೆ ಎಂದರು.
ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್ ಮಾತನಾಡಿ, ಮಹಿಳೆಯರು ಆರ್ಥಿಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ವಿವಿಧ ಕಾರ್ಯಕ್ರಮಗಳನ್ನು ಯೋಜನೆಯಿಂದ ಆಯೋಜಿಸಲಾಗುತ್ತದೆ. ಸ್ವಪ್ರೇರಣಾ ಶಿಬಿರದಲ್ಲಿ ಆಸಕ್ತಿ ಹೊಂದಿರುವ ವೃತ್ತಿ ಕೌಶಲದ ಕಾರ್ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಮಹಿಳೆಯರು ವೃತ್ತಿಕೌಶಲ ಹೆಚ್ಚಿಸಿಕೊಳ್ಳುವುದರ ಜತೆಗೆ ಆರ್ಥಿಕವಾಗಿ ಸಬಲರಾಗಬೇಕು. ಇದರಿಂದ ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಲಿದೆ ಎಂದರು.
ತಾಲೂಕು ಯೋಜನಾಧಿಕಾರಿ ಪ್ರಸಾದ್, ತರಬೇತಿ ಉಪನ್ಯಾಸಕ ರವಿಚಂದ್ರನ್, ಮೇಲ್ವಿಚಾರಕ ಅರುಣ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ, ಸೇವಾಧಿಪ್ರತಿನಿಧಿ ಜ್ಯೋತಿ, ದಾಕ್ಷಾಯಿಣಿ ಇತರರಿದ್ದರು.