ಜಿಲ್ಲೆ

ಜನರನ್ನು ಒಗ್ಗೂಡಿಸುವ ಜಾತ್ಯತೀತ ಗಣೇಶ ಹಬ್ಬ

ಹುಬ್ಬಳ್ಳಿ: ಹುಬ್ಬಳ್ಳಿಯ ಗಣೇಶ ಹಬ್ಬಕ್ಕೆ ಮುಂಬೈ ನಂತರ ಎರಡನೇ ಸ್ಥಾನವಿದೆ. ಇಂಥ ಹಬ್ಬ ಜಾತ್ಯತೀತವಾಗಿ ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಶಾಸಕ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರು ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಇಲ್ಲಿಯ ಹಳೇ ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರೃದ ಕಿಚ್ಚು ಹೊತ್ತಿಸುವ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕು ಗಣೇಶ ಹಬ್ಬವನ್ನು ಆಚರಣೆಗೆ ತಂದರು. ಈಗ ಇದು ಎಲ್ಲ ಸಮುದಾಯದವರು ಸೇರಿ ಆಚರಿಸುವ ಹಬ್ಬವಾಗಿದೆ. ಹುಬ್ಬಳ್ಳಿಯ ಗಣೇಶ ಹಬ್ಬ ನೋಡಲು ಸುತ್ತಲಿನ 8-10 ಜಿಲ್ಲೆಗಳ ಜನರು ಆಗಮಿಸುತ್ತಾರೆ. ಕಾನೂನು ರೀತಿಯಲ್ಲಿ ಎಲ್ಲರೂ ಗಣೇಶ ಹಬ್ಬ ಆಚರಣೆ ಮಾಡಿ ಹುಬ್ಬಳ್ಳಿಗೆ ಮೆರಗು ತರಬೇಕು ಎಂದು ವಿನಂತಿಸಿದರು.
ಮಹಾಮಂಡಳ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿ, ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಈ ಬಾರಿ ಆಚರಿಸಲಾಯಿತು. ಸೆ. 17ರಂದು ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ತಾವುಗಳೆಲ್ಲರೂ ಭಾಗಿಯಾಗಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಮಾಜಿ ಮೇಯರ್‌ಗಳಾದ ಡಾ. ಪಾಂಡುರಂಗ ಪಾಟೀಲ, ರಾಧಾಬಾಯಿ ಸಫಾರೆ, ಪಾಲಿಕೆ ಸದಸ್ಯರಾದ ಸುಮಿತ್ರಾ ಗುಂಜಾಳ, ಮಹ್ಮದ್ ಆರೀಫ್ ದೊಡ್ಡಮನಿ, ಅರ್ಜುನ ಪಾಟೀಲ, ಹಳೇ ಹುಬ್ಬಳ್ಳಿ ಗಣೇಶೋತ್ಸವ ಸಮಿತಿಯ ಎಸ್.ಎಸ್. ಸಾಲಿಮಠ, ಮಹಾಮಂಡಳದ ಉಪಾಧ್ಯಕ್ಷರಾದ ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರ, ಕಾರ್ಯದರ್ಶಿಗಳಾದ ಅಮರೇಶ ಹಿಪ್ಪರಗಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಪ್ರಮುಖರಾದ ಅನಿಲ ಬೆವಿನಕಟ್ಟಿ, ಉಮೇಶ ಪಡಗಾವಿ, ಸಂತೋಷ ಕಟ್ಟಿ, ಚಂದ್ರಶೇಖರ ಗಾಣಿಗೇರ, ಸುರೇಂದ್ರ ಜಾಗೀರದಾರ, ಬಸವರಾಜ ಅಪ್ಪಣ್ಣಗೌಡರ, ಸಂತೋಷ ಕಿನ್ನಾಳ, ಗುರುರಾಜ ಪಡಗಾವಿ, ಮುತ್ತುರಾಜ ಉಣಕಲ್, ಮಹಾಲಕ್ಷ್ಮೀ ಸಜ್ಜನ, ಈರಣ್ಣ ಪಾಳೇದ, ಸಿದ್ದಪ್ಪ ಅಂಗಡಿ, ಸರಸ್ವತಿ ಮೆಹರವಾಡೆ, ಸಾಧನಾ ಪೂಜಾರ, ಇತರರು ಇದ್ದರು.
9ನೇ ದಿನದ ಗಣೇಶ ಮೂರ್ತಿಗೆ ವಿದಾಯ: ಹಳೇ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ 9ನೇ ದಿನ ಸುಮಾರು 160ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮವು ಭಾನುವಾರ ವಿಜೃಂಭಣೆಯಿಂದ ಜರುಗಿತು.
ಮೆರವಣಿಗೆಯು ಮಹಿಳೆಯರ ಭಜನೆ, ನೃತ್ಯಗಳಿಂದ ಆಕರ್ಷಿಕವಾಗಿ ಕೂಡಿತ್ತು. ಯುವಕರು ಜಾಂಜ್ ಬಾರಿಸುತ್ತ ‘ಗಣಪತಿ ಬಪ್ಪಾ ಮೋರಯಾ, ಗಣಪತಿ ಮಹಾರಾಜ ಕೀ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಹಲವರು ಗಣೇಶ ಮೂರ್ತಿಗೆ ಹರಕೆ ತೀರಿಸಿ ಪುನೀತರಾದರು.
ವಿಸರ್ಜನಾ ಮೆರವಣಿಗೆಯು ಹಳೇ ಹುಬ್ಬಳ್ಳಿ ದುರ್ಗದ ಬೈಲ್‌ನಿಂದ ಪ್ರಾರಂಭವಾಗಿ ಚನ್ನಪೇಟ, ಅರವಿಂದ ನಗರ, ಕಾರವಾರ ರಸ್ತೆ ಮುಖಾಂತರ ಇಂದಿರಾ ಗಾಜಿನ ಮನೆ ಆವರಣದಲ್ಲಿರುವ ಹಾಗೂ ಹೊಸೂರಿನಲ್ಲಿರುವ ಶ್ರೀ ಗಣೇಶ ಬಾವಿ ತಲುಪಿತು. ನಂತರ ಪೂಜಾ ಕೈಂಕರ್ಯ ನೆರವೇರಿಸಿ ವಿಸರ್ಜಿಸಲಾಯಿತು.

11ನೇ ದಿನದ ಮೆರವಣಿಗೆ ನಾಳೆ: ಶ್ರೀ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆ ಉದ್ಘಾಟನಾ ಸಮಾರಂಭವು ನಗರದ ದುರ್ಗದಬೈಲ್‌ನಲ್ಲಿ ಸೆ. 17ರಂದು ಬೆಳಗ್ಗೆ 11ಕ್ಕೆ ಏರ್ಪಾಟಾಗಿದೆ.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಉದ್ಯಮಿಗಳಾದ ಜಿತೇಂದ್ರ ಮಜೇಥಿಯಾ, ರವೀಂದ್ರ ರೇವಣಕರ ಅತಿಥಿಗಳಾಗಿ ಆಗಮಿಸುವರು. ಅಂದು ಸುಮಾರು 200ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ.