ಜಿಲ್ಲೆ

ಜನಾಂದೋಲನಕ್ಕೆ ಹರಿದುಬಂದ ಜನಸಾಗರ: ಎತ್ತ ನೋಡಿದರೂ ಜನವೋ ಜನ….!

ಮೈಸೂರು: ಕಾಂಗ್ರೆಸ್ ಜನಾಂದೋಲನ ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿತ್ತು. ಎತ್ತ ನೋಡಿದರೂ ಜನವೋ ಜನ….!


ಸಮಾವೇಶ ಆಯೋಜಿಸಿದ್ದ ಮಹಾರಾಜ ಕಾಲೇಜು ಮೈದಾನ ಮತ್ತು ಅದರ ಸುತ್ತಮುತ್ತಲ ರಸ್ತೆಗಳು ಜನರಿಂದ ತುಂಬಿ ಹೋಗಿತ್ತು. ಅಕ್ಕಪಕ್ಕದ ಜಿಲ್ಲೆಗಳಲ್ಲದೆ ವಿವಿಧೆಡೆಯಿಂದ ಜನರು, ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರು ಲಗ್ಗೆ ಇಟ್ಟಿದ್ದರು.

ವೇದಿಕೆ ಮುಂಭಾಗ ಹಾಕಿದ್ದ ಕುರ್ಚಿಗಳು ಭರ್ತಿಯಾಗಿ ಸಹಸ್ರಾರು ಜನರು ರಸ್ತೆಯಲ್ಲೇ ನಿಂತರು. ಪಾದಚಾರಿ ಮಾರ್ಗ, ಮರಗಳಡಿ ಕುಳಿತರು. ಕೆಲವರು ಬಸ್‌ಗಳ ಕಡೆ ತೆರಳಿದರು. ಒಳಗೆ ಕುರ್ಚಿ ಸಿಗದೆ ನಿರಾಸೆಗೊಂಡವರು.

ವೇದಿಕೆ ಕಡೆಗೆ ತೆರಳಲು ಬಹಳಷ್ಟು ಯತ್ನಿಸಿದರು. ಆದರೆ ಮುಖ್ಯಗೇಟ್ ಬಂದ್ ಮಾಡಿದ್ದರಿಂದ ಮೈದಾನದ ಹೊರಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಜತೆಗೆ ಮೈದಾನದಿಂದ ಅಗ್ನಿಶಾಮಕ ವೃತ್ತ ಹಾಗೂ ಕ್ರಾಫರ್ಡ್ ಭವನದವರೆಗೂ ಜನರು ಜಮಾವಣೆಗೊಂಡಿದ್ದರು.


ಕಾರ್ಯಕರ್ತರು ಕೃಷ್ಣರಾಜ ಬುಲೆವಾರ್ಡ್ ರಸ್ತೆ ವಿಭಜಕದ ಮಧ್ಯದ ಮರಗಳ ನೆರಳಲ್ಲಿ ಬಹಳಷ್ಟು ಆಶ್ರಯ ಪಡೆದರು. ಕೆಲವರು ನಿದ್ದೆಗೂ ಜಾರಿದರು. ಕರೆತಂದ ಬಸ್‌ಗಳತ್ತ ತೆರಳಿ ವಿಶ್ರಾಂತಿ ಪಡೆದರು. ಮತ್ತೆ ಕೆಲವರು ನಗರ ಪ್ರದಕ್ಷಿಣೆ ತೆರಳಿದರು.


ಕೆಎಸ್‌ಆರ್‌ಟಿಸಿ ಬಸ್‌ಗಳೊಂದಿಗೆ ಖಾಸಗಿ ಬಸ್, ಲಾರಿಗಳಲ್ಲಿ ಜನರು ಬಂದಿದ್ದರು. ಹೃದಯ ಭಾಗದ ರಸ್ತೆಗಳಲ್ಲಿ ಸಂಜೆ 6ರವರೆಗೂ ಸಂಚಾರ ದಟ್ಟಣೆ ಕಂಡು ಬಂತು. ಶಾಲಾ-ಕಾಲೇಜು, ಕಚೇರಿಗೆ ತೆರಳುವವರು ತೊಂದರೆ ಅನುಭವಿಸಿದರು. ಬೆಳಗ್ಗೆಯಿಂದ ಸಂಜೆ ವರೆಗೂ ಸಂಚಾರ ದಟ್ಟಣೆ ಇತ್ತು. ಇದರಿಂದ ಸಂಚಾರ ಸಮಸ್ಯೆ ಸಹ ಉಂಟಾಯಿತು.

ಟ್ರಾಫಿಕ್ ಜಾಮ್:


ಸಂಚಾರ ನಿಯಂತ್ರಣಕ್ಕಾಗಿ ವೇದಿಕೆ ಸುತ್ತಲಿನ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಖಾಸಗಿ ವಾಹನಗಳ ಓಡಾಟಕ್ಕೂ ಕಡಿವಾಣ ಹಾಕಲಾಗಿತ್ತು. ಆದರೆ ಅದು ಫಲಕೊಡಲಿಲ್ಲ. ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ವಿನೋಬಾ ರಸ್ತೆ, ಎಂಜಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ಆರ್‌ಟಿಒ ವೃತ್ತ, ಕ್ರಾಫರ್ಡ್ ಹಾಲ್ ವೃತ್ತ, ಹುಣಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು, ವಾಹನ ಸವಾರರು ತೊಂದರೆ ಅನುಭವಿಸಿದರು.


ಮಂಡ್ಯ-ಬೆಂಗಳೂರು ಕಡೆಯಿಂದ ಬರುವ ಬಸ್‌ಗಳಿಗೆ ಜೆ.ಕೆ.ಮೈದಾನದಲ್ಲಿ ಪಾಕಿರ್ಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಹೀಗೆ ವಿವಿಧೆಡೆಯಿಂದ ಬರುವ ಬಸ್‌ಗಳು ನಗರದಲ್ಲಿ ನಿರ್ದಿಷ್ಟ ಜಾಗದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯವರು ಮಧ್ಯಾಹ್ನ ಹೊತ್ತಿಗೆ ಬಂದರು. ಹೀಗಾಗಿ 3 ಕಿ.ಮೀ ದೂರವಿರುವ ಮಹಾರಾಜ ಕಾಲೇಜು ಮೈದಾನಕ್ಕೆ ಕಾಲ್ನೆಡಿಗೆಯಲ್ಲಿ ಬಂದರು.

ಮಜ್ಜಿಗೆ, ನೀರಿಗಾಗಿ ನೂಕುನುಗ್ಗಲು:


ಮಹಾರಾಜ ಕಾಲೇಜು ಮೈದಾನದಲ್ಲಿ ಅಲ್ಲಿಲ್ಲಿ ನೀರು, ಮಜ್ಜಿಗೆ ಉಚಿತವಾಗಿ ವಿತರಿಸಲಾಯಿತು. ಪಕ್ಷದ ಕಾರ್ಯಕರ್ತರು ಅವುಗಳನ್ನು ಪಡೆಯಲು ಮುಗಿಬಿದ್ದರು. ಹಲವು ಮಜ್ಜಿಗೆ ಪ್ಯಾಕೆಟ್‌ಗಳು ಒಡೆದವು. ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಪರದಾಡಿದರು.

ಕಸದ ರಾಶಿ ರಾಶಿ…


ಸಮಾವೇಶದ ಜಾಗದಲ್ಲಿ ಕಸದ ರಾಶಿ ಕಂಡು ಬಂತು. ಬಾಟಲಿಗಳು, ಮಜ್ಜಿಗೆ ಪ್ಯಾಕೆಟ್‌ಗಳ ತ್ಯಾಜ್ಯ ಎಲ್ಲೆಡೆ ರಾರಾಜಿಸಿತು. ಕಸದ ಬುಟ್ಟಿ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದಾಗಿ ಎಲ್ಲಿಬೇಕಲ್ಲಿ ಕಸ ಹಾಕಿ ಹೋದರು. ವೇದಿಕೆ ಪಕ್ಕದಲ್ಲಿ ಶೌಚಗೃಹ ವ್ಯವಸ್ಥೆ ಮಾಡಿದ್ದರೂ ಮೈದಾನದ ಖಾಲಿ ಜಾಗಗಳಲ್ಲಿ ನೈಸರ್ಗಿಕ ಕ್ರಿಯೆಯನ್ನು ಪೂರೈಸಿಕೊಂಡರು. ವಸತಿ ಪ್ರದೇಶದ ಬಳಿಯೂ ಇದು ನಡೆಯಿತು.

ಕೆಲ ವ್ಯಾಪಾರ, ಕೆಲ ಕಡೆ ಇಲ್ಲ:


ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಮಳಿಗೆಗಳ ವ್ಯಾಪಾರ-ವಹಿವಾಟಿಗೆ ಅಡೆತಡೆ ಉಂಟಾಯಿತು. ಕೆಲವೆಡೆ ವ್ಯಾಪಾರವೇ ಇರಲಿಲ್ಲ. ಬೇಕರಿ, ನಂದಿನಿ ಬೂತ್, ಟೀ ಅಂಗಡಿಗಳಿಗೆ ಕುರಕಲು ತಿಂಡಿ, ಪಾನೀಯಗಳನ್ನು ಕೊಳ್ಳಲು ಮಾತ್ರ ಜನರು ಮುಗ್ಗಿಬಿದ್ದಿದ್ದರು.

ಮಹಾರಾಜ ಕಾಲೇಜು ಮೈದಾನದ ನಂದಿನಿ ಬೂತ್ ಲಸ್ಸಿ, ಮಜ್ಜಿಗೆ ಪೊಟ್ಟಣಗಳು ತ್ವರಿತಗತಿಯಲ್ಲಿ ಬಿಕರಿಯಾದವು. ನೆಲಗಡಲೆ, ಸೌತೆಕಾಯಿ, ಚುರುಮುರಿ, ಐಸ್‌ಕ್ರೀಂ, ಕಬ್ಬಿನ ಜ್ಯೂಸ್, ಎಳನೀರು, ತಂಪು ಪಾನೀಯಗಳು ಸೇರಿದಂತೆ ವಿವಿಧ ತಿನಿಸುಗಳ ಮಾರಾಟ ಭರ್ಜರಿಯಾಗಿಯೇ ನಡೆಯಿತು.

ರಾರಾಜಿಸಿದ ಫ್ಲೆಕ್ಸ್‌ಗಳು


ಸಾಂಸ್ಕೃತಿಕ ನಗರಿ ಒಂದು ದಿನ ಮಟ್ಟಿಗೆ ಫ್ಲೆಕ್ಸ್‌ಮಯವಾಗಿತ್ತು. ಎಲ್ಲೆಡೆ ಕಟೌಟ್ ಕಣ್ಣು ಕುಕ್ಕಿದ್ದವು. ಕಾಂಗ್ರೆಸ್ ಚಿಹ್ನೆ ಬಂಟಿಂಗ್ಸ್‌ಗಳು ಪ್ರಮುಖ ವೃತ್ತ, ರಸ್ತೆಗಳಿಗೆ ಕಟ್ಟಲಾಗಿತ್ತು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರ ಫ್ಲೆಕ್ಸ್‌ಗಳು ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿ ರಸ್ತೆಯ ಸೇರಿದಂತೆ ವಿವಿಧ ರಸ್ತೆಗಳ ವಿದ್ಯುತ್ ಕಂಬಗಳಿಗೆ ಹಾಕಲಾಗಿತ್ತು. ಪಕ್ಷದ ಬಾವುಟ, ಚಿಹ್ನೆಯ ಬಂಟಿಂಗ್ಸ್‌ಗಳು ರಾರಾಜಿಸಿದವು.

ಮೆಟ್ರೋಪೋಲ್ ವೃತ್ತ ಹಾಗೂ ಏಕಲವ್ಯ ವೃತ್ತದಲ್ಲಿ ಅಳವಡಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರುದ್ಧ ಬಿಜೆಪಿಯು 2023ರ ಫೆಬ್ರವರಿಯಲ್ಲಿ ನೀಡಿದ್ದ ಜಾಹೀರಾತಿನ ಫ್ಲೆಕ್ಸ್ ಗಮನ ಸೆಳೆಯಿತು. ಕಾರ್ಯಕರ್ತರು, ಬೆಂಬಲಿಗರು ಅದರ ಫೋಟೊ, ವಿಡಿಯೋ ಮಾಡಿಕೊಂಡರು.

ಪ್ರಯಾಣಿಕರ ಪರದಾಟ


ಸಮಾವೇಶಕ್ಕೆ ಜನರನ್ನು ಕರೆತರಲು ಹೆಚ್ಚಿನ ಪ್ರಮಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಯಿತು. ಇದರಿಂದ ಬಸ್ ಕೊರತೆ ಉಂಟಾಯಿತು.

ನಗರದ ಗ್ರಾಮಾಂತರ ಬಸ್ ನಿಲ್ದಾಣ ಮತ್ತು ನಗರ ಬಸ್ ನಿಲ್ದಾಣದಲ್ಲಿ ಬಸ್‌ಗಳ ಅಭಾವ ಕಂಡುಬಂದಿತ್ತು. ಇದರಿಂದಾಗಿ ದೂರ ಊರುಗಳಿಗೆ ಹೋಗುವ ಜನರು, ನಗರದ ವಿವಿಧ ಬಡಾವಣೆಗಳಿಗೆ ತೆರಳುವ ಪ್ರಯಾಣಿಕರು ಪರದಾಡಿದರು. ಪಿಯು ಪರೀಕ್ಷೆಗಳಿದ್ದರಿಂದ ವಿದ್ಯಾರ್ಥಿಗಳು ಸಂಜೆ ವೇಳೆ ಮರಳಲು ತೊಂದರೆ ಆಯಿತು. ಗ್ರಾಮೀಣ ಪ್ರದೇಶದ ಮಕ್ಕಳು 2-3 ತಾಸಿನ ವರೆಗೂ ಬಸ್‌ಗಳಿಗೆ ಕಾಯಬೇಕಾಯಿತು.