ಜಿಲ್ಲೆ

ಸಿರಿಧಾನ್ಯ ಮೇಳಕ್ಕೆ ಹರಿದು ಬಂದ ಜನಸಾಗರ; ಮಾರಾಟ ಮಳಿಗೆಗಳಿಗೆ ಜನರ ಮುತ್ತಿಗೆ

ಬೆಂಗಳೂರು: ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳದ 2ನೇ ದಿನ ಶುಕ್ರವಾರ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದರು. 300ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮಳಿಗೆಗಳ ಮುಂದೆ ಜನರ ಮುತ್ತಿಗೆ ದೃಶ್ಯ ಕಂಡು ಬಂತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ರೈತರು ಬೇರೆ ಬೇರೆ ತಳಿಯ ಬೀಜ, ಧಾನ್ಯ, ಕೃಷಿ ಯಂತ್ರೋಪಕರಣಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದರೆ, ಬೆಂಗಳೂರಿಗರು ಸಿರಿಧಾನ್ಯ ಮತ್ತಿತರ ಸಾವಯವ ಪದಾರ್ಥದಿಂದ ತಯಾರಿಸಲ್ಪಟ್ಟ ವಿಶೇಷ ಖಾದ್ಯಗಳ ರುಚಿ ನೋಡುವುದು ಖರೀದಿ ಮಾಡುವುದರಲ್ಲಿ ಮಗ್ನರಾಗಿದ್ದರು.

ಇನ್ನೊಂದೆಡೆ ಸಮಾನ ವೇದಿಕೆಗಳಲ್ಲಿ ಸಿರಿಧಾನ್ಯದ ಮಹತ್ವ, ಪ್ರಯೋಜನ, ಬೆಳೆಯುವ ವಿಧಾನ ಮತ್ತಿತರ ಅಂಶಗಳ ಕುರಿತು ನಡೆದ ವಿಚಾರ ಗೋಷ್ಠಿಗಳಲ್ಲಿ ಪಾಲ್ಗೊಂಡ ರೈತರು ತಜ್ಞರು ನೀಡಿದ ಮಾಹಿಯನ್ನು ಪಡೆದುಕೊಂಡರು. ಮಣ್ಣು, ಮಳೆನೀರು, ಇಂಗಾಲ ವಿಷಯ ಕುರಿತು ಮಾತನಾಡಿದ ಕೃಷಿವಿಜ್ಞಾನಿ ಡಾ.ಜಿ.ಎಚ್.ಯೋಗೇಶ್, ರಾಸಾಯನಿಕ ಔಷಧಿಗಳು ಹಾಗೂ ರಸಗೊಬ್ಬರವನ್ನು ಕಡಿಮೆ ಮಾಡಿ ಮಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಬೇಕು ಮತ್ತು ನೈಸರ್ಗಿಕವಾಗಿ ಲವತ್ತತೆಯನ್ನು ಹೆಚ್ಚಿಸುವ ಉಪಾಯಗಳ ಕುರಿತು ವಿವರಿಸಿದರು. ಒಣ ಪ್ರದೇಶದಲ್ಲಿ ಸುಸ್ಥಿರ ಅಹಾರ ಹಾಗೂ ಮೇವು ಭದ್ರತೆಗೆ ಸಿರಿಧಾನ್ಯಗಳು ಎಂಬ ವಿಷಯದ ಕುರಿತು ಮಾತನಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಎನ್.ಜಿ.ಹನುಮರೆಡ್ಡಿ, ಜಾನುವಾರು ರತಹಿತವಾಗಿ ಮಾಡುವ ಕೃಷಿ ಪರಿಪೂರ್ಣವಲ್ಲ. ಪ್ರತಿ ಬೆಳೆಯ ಜೊತೆಗೆ ಮೇವು ಕೂಡಾ ರೈತನ ಗುರಿಯಾಗಿರಬೇಕು. ಸಿರಿಧಾನ್ಯ ಬೆಳೆಯಲ್ಲಿ ಜಾನುವಾರಗಳ ಮೇವಿನ ಅಗತ್ಯವೂ ಪೂರ್ಣವಾಗುತ್ತದೆ ಎಂದು ಹೇಳಿದರು. ಮಧ್ಯಾಹ್ನದ ನಂತರವೂ ಅಂತರಾಷ್ಟ್ರೀಯ ಸಮ್ಮೇಳನ, ರೈತರ ವಿವಿಧ ಕಾರ್ಯಾಗಾರಗಳು, ಬಿ2ಬಿ, ಎ್2ಬಿ ಅಧಿವೇಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರೆದವು. ಇಂದು (ಶನಿವಾರ) ಸಿರಿಧಾನ್ಯ ಮೇಳಕ್ಕೆ ತೆರೆಬೀಳಲಿದ್ದು, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಬಾಯಲ್ಲಿ ನೀರೂರಿಸುವ ಖಾದ್ಯಗಳು

ಸಿರಿಧಾನ್ಯಗಳಿಂದ ಕೇವಲ ಪಾರಂಪರಿಕೆ ಖಾದ್ಯಗಳಷ್ಟೇ ಅಲ್ಲದೆ ಯುವ ಸಮುದಾಯವನ್ನು ಸೆಳೆಯುವ ಆಧುನಿಕ ಆಹಾರ ಪದಾರ್ಥಗಳನ್ನು ತಯಾರಿಸಿದ್ದು ಮೇಳದ ಆಕರ್ಷಣೆ ಹೆಚ್ಚಿಸಿತ್ತು. ನವಣೆ ಮಸಾಲೆ ಬ್ರೆಡ್, ರಾಗಿ ಬ್ರೆಡ್, ಫಿಜ್ಜಾ, ಬರ್ಗರ್, ನೂಡಲ್ಸ್, ಬಿಸ್ಕತ್ ಚಕ್ಕುಲಿ, ಚಿಕ್ಕಿ, ಚಾಕಲೇಟ್, ಜಾಮುನು ಇತ್ಯಾದಿ ಖಾದ್ಯಗಳು ಆಗಮಿಸಿದವರ ಬಾಯಲ್ಲಿ ನೀರು ತರಿಸುತ್ತಿದ್ದವು. ವ್ಯಾಪಾರಿಗಳು ಟೇಸ್ಟ್ ಮಾಡಲು ಗ್ರಾಹಕರ ಸ್ಯಾಂಪಲ್‌ಗಾಗಿ ನೀಡುತ್ತಿದ್ದ ಕುರಕಲು ಮೆಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಿಲೆಟ್ ಐಸ್‌ಕ್ರೀಮ್ ಮೇಳದ ಪ್ರಮುಖ ಆಕರ್ಷಣೆಯಾಗಿತ್ತು.

ಸಿರಿಧಾನ್ಯ, ಸಾವಯವ ಮೇಳದಿಂದ ರೈತರಿಗೆ ಮಾರುಕಟ್ಟೆ ಒದಗುತ್ತದೆ. ತೋಟಗಾರಿಕೆ ಬೆಳೆಯಾಗಿರುವ ದ್ರಾಕ್ಷಿ ಬೆಳೆಗಾರರು ವಿಜಯಪುರ ಭಾಗದಲ್ಲಿ ಹೆಚ್ಚಾಗಿದ್ದು, ಒಣದ್ರಾಕ್ಷಿಯನ್ನು ಗ್ರಾಹಕರಿಗೆ ತಲುಪಿಸಲು, ರೈತರಿಗೆ ಮಾರುಕಟ್ಟೆ ಸೃಷ್ಟಿಸಲು ಮಾವು ಮೇಳ, ಹಲಸು ಮೇಳದ ರೀತಿ ಒಣದ್ರಾಕ್ಷಿ ಮೇಳವನ್ನು ಮಾಡಿದರೆ ರೈತರಿಗೆ ಇನ್ನಷ್ಟು ಅನುಕೂಲವಾಗುತ್ತದೆ.  -ಶಿವಕುಮಾರಸ್ವಾಮಿ ಹಿರೇಮಠ, ದ್ರಾಕ್ಷಿ ಬೆಳೆಗಾರರು