ಮಡಿಕೇರಿ: ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲಾ ಹಿರಿಯ ಮುಖ್ಯ ಶಿಕ್ಷಕಿ ಎಚ್.ಕೆ.ಸುಶೀಲ ಮಾತನಾಡಿ, ಶಾಲೆಯಲ್ಲಿ ಸಿಗುವ ಉಚಿತ ಸೌಲಭ್ಯ ಹಾಗೂ ಸರ್ಕಾರದ ವತಿಯಿಂದ ದೊರೆಯುವ ಉಚಿತ ಸೌಲಭ್ಯಗಳ ಬಗ್ಗೆ ವಿವರಿಸಿದರು.
೬ನೇ ತರಗತಿಯ ಯುವ ಮುತ್ತಪ್ಪ, ೭ನೇ ತರಗತಿಯ ಅಂಚಲ್ ದೇಚಮ್ಮ ಹಾಗೂ ಎಸ್.ವಿ.ಖುಷಿ ಮಧ್ಯಪ್ರದೇಶ ರಾಜ್ಯದ ಭೋಪಾಲ್ ಹಾಗೂ ಮನ್ಸೂರ್ ಸ್ಥಳದಲ್ಲಿ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಲಾದ ಹಾಕಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ಜಗದೀಶ್ ಮಾತನಾಡಿ, ಶಾಲೆಗೆ ಪೋಷಕರ ಸಹಕಾರ ಅಗತ್ಯ ಎಂದು ತಿಳಿಸಿದರು.
೨೦೨೪-೨೫ನೇ ಸಾಲಿನ ನಿರಂತರ ಹಾಗೂ ವ್ಯಾಪಕ ಮೌಲ್ಯ ಮಾಪನದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಕವಿತಾ, ಸಿ.ಸಿ.ಮ್ಯಾಥ್ಯೂ, ಜಯಮ್ಮ ಇತರರಿದ್ದರು.