ತರೀಕೆರೆ: ಪ್ರಶಸ್ತಿ ಮತ್ತು ಪ್ರಶಂಸೆಗಳು ವಿವಿಧ ಕ್ಷೇತ್ರದಲ್ಲಿ ಸಾಧನೆಗೆ ಪ್ರೇರಣೆಯಾಗಲಿದೆ. ಯುವಜನತೆ ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಾದರಿಯಾಗಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಶನಿವಾರ ಆಯೋಜಿಸಿದ್ದ ರಾಜ್ಯ ಮತ್ತು ಜಿಲ್ಲಾ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾಯಕತ್ವ ಗುಣ ಅಳವಡಿಸಿಕೊಂಡು ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಸರ್ಕಾರ ಯುವಜನರ ಕಲ್ಯಾಣಕ್ಕೆ ಹಲವು ಯೋಜನೆ ಅನುಷ್ಠಾನಗೊಳಿಸುತ್ತಿದ್ದು ಸದ್ಬಳಕೆಯಾಗಬೇಕು ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಎಸ್.ಬಾಲಾಜಿ ಮಾತನಾಡಿ, ಸರ್ಕಾರ ಕಳೆದ 13 ವರ್ಷಗಳಿಂದ ರಾಜ್ಯದ ಯುವ ಸಾಧಕರಿಗೆ ನೀಡುವ ಪ್ರಶಸ್ತಿ ಪ್ರದಾನ ಪ್ರಕ್ರಿಯೆ ಸ್ಥಗಿತಗೊಳಿಸಿದೆ. ಆದರೆ ಒಕ್ಕೂಟ ಅಂದಿನಿಂದಲೂ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಹಾಗೂ ಯುವ ಸಮುದಾಯದ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಿ ಯುವ ಸಾಧಕರು ಮತ್ತು ಹೋರಾಟಗಾರರನ್ನು ಗುರುತಿಸುವ ಮೂಲಕ ಪ್ರಶಸ್ತಿ ನೀಡಿ ಪ್ರೇರೇಪಿಸುತ್ತಿದೆ ಎಂದರು.
ಸರ್ಕಾರ ಸ್ಥಗಿತಗೊಳಿಸಿರುವ ಪ್ರಶಸ್ತಿ ಪ್ರದಾನ ಪ್ರಕ್ರಿಯೆಯನ್ನು ಪುನರಾರಂಭಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಹೋರಾಟ ಮಾಡುತ್ತಿರುವ ಯುವ ಜನತೆಗೆ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸಂಘಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಜಾವೇದ್ ಜಮಾದಾರ್ ವಿಜಯಪುರ ವಿವಿಧ ಕ್ಷೇತ್ರದ ಸಾಧಕ ಯುವಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪುರಸಭೆ ಅಧ್ಯಕ್ಷ ಪರಮೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಇಮ್ರಾನ್ ಅಹಮದ್ ಬೇಗ್, ಗೌರವಾಧ್ಯಕ್ಷೆ ವಿಶಾಲಾಕ್ಷಮ್ಮ, ಪುರಸಭೆ ಸದಸ್ಯ ಟಿ.ಜಿ.ಶಶಾಂಕ್ ಮತ್ತಿತರರಿದ್ದರು.