ಹುಬ್ಬಳ್ಳಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಉರುಳಾಗಿ ಪರಿಣಿಮಸಲಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡುವ ಪ್ರಸಂಗ ಬರುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ನಿಗಮದ ಹಣಕಾಸು ಕೆಲಸಗಳು ರಾಜ್ಯದ ಒಳಗೇ ನಡೆಯಬೇಕು. ಆರ್ಥಿಕ ನೆರವು ನೀಡುವುದಾಗಲಿ, ವಾಹನ ಖರೀದಿಸಲು ಸಾಲ ನೀಡುವುದಾಗಲಿ ಅದು ಕರ್ನಾಟಕದ ಫಲಾನುಭವಿಗಳಿಗೆ ಮಾತ್ರ ತಲುಪಬೇಕು. ಆದರೆ, ಈ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗದಮ ಹಣವನ್ನು ಹೈದ್ರಾಬಾದ್ಗೆ ಏಕೆ ವರ್ಗಾಯಿಸಿತು ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ್ದು ಬ್ರಹ್ಮಾಂಡ ಭ್ರಷ್ಟಾಚಾರದ ಹಗರಣವಾಗಿದೆ. ಇದು 60 ಪರ್ಸೆಂಟೇಜ್ ಭಷ್ಟಾಚಾರದ ಸರ್ಕಾರ. ಈ ಹಗರಣ ಸರ್ಕಾರವನ್ನು ಉರುಳಿಸಿದರೂ ಅಚ್ಚರಿ ಇಲ್ಲ ಎಂದರು.
ಸಚಿವ ನಾಗೇಂದ್ರ ರಾಜೀನಾಮೆ ಈ ಸರ್ಕಾರದ ಮೊದಲ ಬಲಿ. ಮುಂದಿನ ದಿನಗಳಲ್ಲಿ ಇನ್ನೂ ಐದಾರು ಸಚಿವರು ರಾಜೀನಾಮೆ ನೀಡುವ ಪ್ರಸಂಗ ಬರಬಹುದಷ್ಟೇ ಅಲ್ಲದೇ, ಜೈಲಿಗೆ ಹೋದರೂ ಹೋಗಬಹುದು ಎಂದು ಭವಿಷ್ಯ ನುಡಿದರು.