ಜಿಲ್ಲೆ

ಸಾತ್ವಿಕ ಆಹಾರ ಪದ್ಧತಿ ಅಗತ್ಯ

Davangere - Desk - Mahesh Babu E

ಚಳ್ಳಕೆರೆ: ಸಾತ್ವಿಕ ಆಹಾರ ಮಹತ್ವ ತಿಳಿದು ಅದನ್ನು ಅನುಸರಿದ ಋಷಿಮುನಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ವೇದಾ ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಟಿ.ರವೀಂದ್ರ ಹೇಳಿದರು.

ತಾಲೂಕಿನ ಸಾಣೀಕೆರೆ ಸಮೀಪದ ವೇದಾ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಕಾಲಘಟ್ಟದಲ್ಲಿ ಆಹಾರ ಪದ್ಧತಿ ಬದಲಾಗಿ ಅನಾರೋಗ್ಯಕ್ಕೆ ಮನುಷ್ಯ ಸಿಲುಕಿದ್ದಾನೆ. ಅದರಿಂದ ಹೊರಬರಲು ಸಾವಯವ, ಸಾತ್ವಿಕ ಆಹಾರ ಬಳಕೆಗೆ ಆದ್ಯತೆ ನೀಡಬೇಕು. ಜತೆಗೆ ನಿತ್ಯ ವ್ಯಾಯಾಮ, ಬಿರುಸು ನಡಿಗೆ, ಧ್ಯಾನ ಜೀವನದ ಭಾಗವಾಗಿಸಿಕೊಳ್ಳಬೇಕು. ಇದರಿಂದ ನೆಮ್ಮದಿ ಜೀವನ ನಮ್ಮದಾಗಲಿದೆ ಎಂದರು.

ವಿದ್ಯಾರ್ಥಿ ದಿಸೆಯಲ್ಲಿ ಸಾಧನೆಯ ಗುರಿ ಇರಬೇಕು. ಇದಕ್ಕೆ ಮಿತ ಆಹಾರ, ಪಠ್ಯೇತರ ಚಟುವಟಿಕೆಗಳು ಸಹಕಾರಿ ಆಗಲಿವೆ. ಬೀದಿಬದಿ ತಿಂಡಿ ತಿನಿಸು ವ್ಯಾಮೋಹ ಇರಬಾರದು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಚಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪಾಲಕರು ಮತ್ತು ವಿದ್ಯಾಸಂಸ್ಥೆಗೆ ಕೀರ್ತಿ ತರುವ ಸಂಕಲ್ಪ ಇರಬೇಕು. ಮಕ್ಕಳ ಉನ್ನತಿ ಬಯಸುವ ಪಾಲಕರ ಪ್ರೀತಿ, ವಿಶ್ವಾಸ, ನಂಬಿಕೆಗೆ ದ್ರೋಹ ಬಗೆಯದ ರೀತಿ ಓದುವಿನಲ್ಲಿ ಆಸಕ್ತಿ ಬೆಳೆಸಿಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಅರ್ಚಕ ಪ್ರಸನ್ನ, ಪ್ರಾಚಾರ್ಯರಾದ ಪುಷ್ಪರಾಣಿ, ಸುಗುಣಾ, ಉಪನ್ಯಾಸಕರಾದ ವಿರೂಪಾಕ್ಷಪ್ಪ, ಪ್ರಶಾಂತ್, ದಯಾನಂದ್, ರವಿಕುಮಾರ್ ಮತ್ತಿತರರಿದ್ದರು.