ಜಿಲ್ಲೆ

ಎ.ಎಸ್​. ಪಾಟೀಲ ವಾಣಿಜ್ಯ ಕಾಲೇಜಿನಲ್ಲಿ ವಿಚಾರ ಸಂಕಿರಣ

ವಿಜಯಪುರ: ಉನ್ನತ ಶಿಕ್ಷಣ ಹಂತದಲ್ಲಿ "ಭಾರತೀಯ ಭಾಷೆಗಳಲ್ಲಿ ಸಂವಾದದ ಸಂಸತಿ & ಸಮಕಾಲೀನ ಜಿಜ್ಞಾಸೆ ಮತ್ತು ಪ್ರಯತ್ನಗಳು' ಎಂಬ ವಿಷಯ ಕುರಿತು ಒಂದು ದಿನದ ವಿಚಾರಣಾ ಸಂಕಿರಣ ಹಾಗೂ ಕಾರ್ಯಗಾರ ಸೆ. 13 ರಂದು ನಗರದ ಎ.ಎಸ್​. ಪಾಟೀಲ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ.

ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಕೂಲ್​ ಆಫ್​ ಎಜ್ಯುಕೇಶನ್​ ಮತ್ತು ಬೆಂಗಳೂರಿನ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10.30 ಕ್ಕೆ ಆಂಧ್ರಪ್ರದೇಶದ ವಿಜಯನಗರದ ಕೇಂದ್ರಿಯ ಬುಡಕಟ್ಟು ವಿವಿಯ ಉಪಕುಲಪತಿ ಪ್ರೊ. ಡಿ.ವಿ. ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸುವರು. ರಾಣಿ ಚನ್ನಮ್ಮ ವಿವಿಯ ಕೆಎಎಸ್​ ಸಂತೋಷ ಕಾಮಗೌಡ ಅಧ್ಯಕ್ಷತೆ ವಹಿಸುವರು.

ಬೆಳಗ್ಗೆ 11.30 ಕ್ಕೆ ಪ್ರಾದೇಶಿಕ ಭಾಷೆಗಳಲ್ಲಿನ ಶೈಕ್ಷಣಿಕ ಸಂಪನ್ಮೂಲಗಳ ಮೂಲಕ ಪರಿಕಲ್ಪನಾತ್ಮಕ ಗ್ರಹಿಕೆಯ ಸಂವರ್ಧನೆ ಎಂಬ ವಿಷಯದ ಕುರಿತ ವಿಚಾರಗೋಷ್ಠಿ ನಡೆಯಲಿದ್ದು, ಹೈದರಾಬಾದ್​ ಇಂಗ್ಲಿಷ್​ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಭಾಷಾಶಾಸ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್​. ಅಮೃತವಲ್ಲಿ, ತೀರ್ಥಹಳ್ಳಿಯ ತುಂಗಾ ಕಾಲೇಜಿನ ನಿವೃತ್ತ ಇಂಗ್ಲಿಷ್​ ಪ್ರಾಧ್ಯಾಪಕ ಪೊ. ಗಣೇಶ ಯು.ಎಚ್​., ಬೆಂಗಳೂರಿನ ಅಜೀಂ ಪ್ರೇಮ್​ಜಿ ವಿಶ್ವವಿದ್ಯಾಲಯದ ಸ್ಕೂಲ್​ ಆಫ್​ ಆರ್ಟ್ಸ್​ ಅಂಡ್​ ಸೈನ್ಸ್​ನ ಬೋಧಕ ಶ್ರೀಕಂಠ ದಾನಿ ಭಾಗವಹಿಸುವರು.

ಮಧ್ಯಾಹ್ನ 12.30 ರಿಂದ 1.30 ರವರೆಗೆ ಅನುವಾದ ಸಂಪದದ ಶೋಧನೆ ಮತ್ತು ಅಜೀಂ ಪ್ರೇಮ್​ಜಿ ವಿಶ್ವವಿದ್ಯಾಲಯದ ಪ್ರಕಟನೆಗಳಿಗೆ ಚಂದಾದಾರರಾಗುವಿಕೆ ಒಂದನೇ ಅಧಿವೇಶನ ನಡೆಯಲಿದ್ದು, ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಅನುವಾದ ಸಂಪದದಲ್ಲಿ ಲಭ್ಯವಿರುವ ಸಾಮಗ್ರಿಗಳು ಮತ್ತು ಹೆಚ್ಚುವರಿ ಸಂಪನ್ಮೂಲಗಳ ರಚನೆ ಮತ್ತು ಸಂಚಯ ಎರಡನೇ ಅಧಿವೇಶನ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.