ಮುದ್ದೇಬಿಹಾಳ: ನಮಗಾಗಿ ಬದುಕುವುದಕ್ಕಿಂತ ಇನ್ನೊಬ್ಬರಿಗಾಗಿ ಜೀವನ ನಡೆಸುವುದು ಶ್ರೇಷ್ಠ. ನಾವು ಅಳಿದ ಮೇಲೂ ನಮ್ಮ ಹೆಸರು ಉಳಿಯುವ ರೀತಿಯಲ್ಲಿ ಬದುಕಬೇಕು. ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರನ್ನು ಒಂದೂವರೆ ಶತಮಾನಗಳ ನಂತರವೂ ಸ್ಮರಿಸುತ್ತಿರುವುದು ಅವರ ಸಾರ್ಥಕ ಬದುಕಿಗೆ ಉದಾಹರಣೆ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿನ ಎಪಿಎಂಸಿ ಸಭಾ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಹಮ್ಮಿಕೊಂಡಿದ್ದ ಫುಲೆ ಜಯಂತ್ಯುತ್ಸವ, ಶೈಕ್ಷಣಿಕ ಕಾರ್ಯಾಗಾರ, ಉತ್ತಮ ಶಿಕ್ಷಕ, ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಭಾರತದಲ್ಲಿರುವ ಸ್ವಾತಂತ್ರ್ಯ ಬೇರೆ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ನಮ್ಮ ದೇಶದ ಇತಿಹಾಸದಲ್ಲಿ ಮಹಿಳೆಯರಿಗೆ ಎಷ್ಟೊಂದು ಪ್ರಾತಿನಿಧ್ಯ ಇತ್ತು ಎಂಬುದನ್ನು ದೇಶವನ್ನಾಳಿದ ರಾಜಮನೆತನಗಳಿಂದ ವೇದ್ಯವಾಗುತ್ತದೆ ಎಂದರು.
ಶಾಸಕ ಸಿ.ಎಸ್.ನಾಡಗೌಡರ ಪುತ್ರಿ ಪಲ್ಲವಿ ನಾಡಗೌಡ ಮಾತನಾಡಿ, ಸಾವಿತ್ರಿಬಾಯಿಯ ಸಾಧನೆ, ಯಶಸ್ಸಿನ ಹಿಂದೆ ಪತಿ ಜ್ಯೋತಿಬಾ ಇದ್ದರು. ಅಸೂಯೆಭರಿತ ಜನರು ಕೊಟ್ಟ ಕಷ್ಟಗಳನ್ನು ಸಹಿಸಿಕೊಂಡು ಸಾವಿತ್ರಿಬಾಯಿ ಅಕ್ಷರ ಕಲಿಸಿದ್ದು ಸಾರ್ಥಕ ಜೀವನಕ್ಕೆ ಕನ್ನಡಿಯಾಗಿದೆ ಎಂದರು.
ಚನ್ನವೀರ ಶಿವಾಚಾರ್ಯರು ಜ್ಯೋತಿ ಬೆಳಗಿಸಿದರು. ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಶ್ರೀಗುರು ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶಿಕ್ಷಕ ಬಸವರಾಜ ಹಂಚಲಿ ಉಪನ್ಯಾಸ ನೀಡಿದರು.
ಐಎನ್‌ಬಿಸಿಡಬ್ಲುಎ್ನ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಂಗೀತಾ ನಾಡಗೌಡ, ಬಿಇಒ ಬಿ.ಎಸ್.ಸಾವಳಗಿ, ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಅಕ್ಕೂಬಾಯಿ ನಾಯಕ, ತಾಲೂಕು ಘಟಕದ ಅಧ್ಯಕ್ಷೆ ಮಹಾದೇವಿ ವಾಲಿ (ಕಿಣಗಿ) ಮಾತನಾಡಿದರು.
ಆಲೂರು ಗ್ರಾಪಂ ಅಧ್ಯಕ್ಷೆ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಶಳ್ಳಗಿ, ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಹನಾ ಬಡಿಗೇರ, ಭಾರತಿ ಪಾಟೀಲ, ಸಂಗಮ್ಮ ದೇವರಳ್ಳಿ, ಬಿಆರ್‌ಸಿ ಯು.ಬಿ.ಧರಿಕಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ ಉಪಸ್ಥಿತರಿದ್ದರು.
25ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಬಾಲಕಿ ಭೂಮಿಕಾ ಹುಣಚಗಿ ಭರತನಾಟ್ಯ ಪ್ರದರ್ಶಿಸಿದರು. ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಶಿಕ್ಷಕಿ ದೀಪಾ ಕೇಸಾಪುರ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿ ವಡವಡಗಿ ನಿರೂಪಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ ಒಣರೊಟ್ಟಿ ವಂದಿಸಿದರು.
ಎ.ಎಸ್.ಪಾಟೀಲ ನಡಹಳ್ಳಿ ಅವರು ಶಾಸಕರಾಗಿದ್ದಾಗ ನಮ್ಮ ಸಂಘಕ್ಕೆ ಲಕ್ಷ ರೂ. ದೇಣಿಗೆ ನೀಡಿ ಸಂಘಟನೆ ಬೆಳೆಯಲೆಂದು ಹಾರೈಸಿದ್ದರು. ಪ್ರತಿ ವರ್ಷ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲು ಈ ಹಣ ಬಳಸಿಕೊಳ್ಳಲಾಗುತ್ತಿದೆ. ಮಹಾದೇವಿ ವಾಲಿ (ಕಿಣಗಿ), ಅಧ್ಯಕ್ಷೆ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ, ಮುದ್ದೇಬಿಹಾಳ