ಮುದ್ದೇಬಿಹಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿದರು. ಗುರುಲಿಂಗಪ್ಪಗೌಡ ಅಂಗಡಿ, ರಾಜಶೇಖರ ಡೊಳ್ಳಿ, ಬಾಲರಾಜ ರಡ್ಡಿ, ಎಂ.ಎಸ್.ಪಾಟೀಲ, ಮುನ್ನಾಧಣಿ ನಾಡಗೌಡ, ಪ್ರಭು ಕಡಿ, ಸಂಗಮ್ಮ ದೇವರಳ್ಳಿ ಇತರರಿದ್ದರು. 
ಜಿಲ್ಲೆ

ಕಾರ್ಯಕರ್ತರನ್ನು ಬೆದರಿಸಿದರೆ ಸಹಿಸಲ್ಲ

ಮುದ್ದೇಬಿಹಾಳ: ಪೊಲೀಸರು ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡಬಾರದು. ಪೊಲೀಸರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಗೋಮುಖ ವ್ಯಾಘ್ರಗಳಿಗೆ ನೀವು ಬಲಿಪಶುಗಳಾಗಬಾರದು. ಯಾರದೋ ಮಾತು ಕೇಳಿ ನಮ್ಮ ಕಾರ್ಯಕರ್ತರನ್ನು, ನಿರಪರಾಧಿಗಳನ್ನು ಬೆದರಿಸುವ ಕೆಲಸ ಮಾಡಿದರೆ ಇನ್ನು ಮುಂದೆ ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ನಾನು ಅವರ ಪರ ನಿಲ್ಲುತ್ತೇನೆ ಎಂದು ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಇಲ್ಲಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ನೀವು ಕಾನೂನು ರೀತಿಯಲ್ಲಿ ಕೆಲಸ ಮಾಡಿದರೆ ನಮ್ಮ ಸಹಕಾರ ಇರುತ್ತದೆ. ಈ ತಾಲೂಕಲ್ಲಿ ಪೊಲೀಸರನ್ನು ಮುಂದಿಟ್ಟುಕೊಂಡು ಗುಂಡಾಗಿರಿ ಮಾಡುವ ಗೋಮುಖ ವ್ಯಾಘ್ರ ಶಾಸಕರ ಮಾತಿನಂತೆ ನಡೆದುಕೊಂಡರೆ ಮುಂದೆ ನೀವು ಸಂಕಷ್ಟಕ್ಕೀಡಾದಾಗ ಅವರೇ ನಿಮ್ಮ ರಕ್ಷಣೆಗೆ ನಿಲ್ಲುವುದಿಲ್ಲ ಎನ್ನುವುದು ನಿಮಗೆ ನೆನಪಿರಲಿ ಎಂದರು.

ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಮೂರು ಬಾರಿ ಶಾಸಕನಾಗಿರುವ, ರಾಷ್ಟ್ರೀಯ ಪಕ್ಷವೊಂದರ ರೈತಮೋರ್ಚಾ ರಾಜ್ಯಾಧ್ಯಕ್ಷನಾಗಿರುವ ನಾನು ಪೊಲೀಸ್ ಸ್ಟೇಷನ್‌ಗೆ ಬಂದಾಗ ನಡೆದುಕೊಂಡ ರೀತಿಯಿಂದ ನೋವಾಗಿದೆ. ಇಂಥ ವರ್ತನೆ ತಿದ್ದಿಕೊಳ್ಳಬೇಕು. ಜನಪ್ರತಿನಿಧಿಗಳು, ಸಾರ್ವಜನಿಕರು ಸ್ಟೇಷನ್‌ಗೆ ಬಂದಾಗ ಯಾವ ರೀತಿ ನಡೆದುಕೊಳ್ಳಬೇಕೆಂದು ಟ್ರೇನಿಂಗ್‌ನಲ್ಲಿ ತಿಳಿಸಿರುತ್ತಾರೆ. ಇದು ಪ್ರೋಟೋಕಾಲ್. ಚಿಕ್ಕ ವಯಸ್ಸಲ್ಲಿ ಪಿಎಸ್‌ಐ ಆಗಿರ‌್ತೀರಿ. ಹಿಂದೆ ಯಾರೂ ಇರೊಲ್ಲ. ಯಾರ ಹತ್ತಿರವೋ ಸಿಕ್ಕಿ ಹಾಕಿಕೊಂಡಿರುತ್ತೀರಿ. ಅಂಥವರ ಕೈಗೊಂಬೆಯಾಗಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಸ್ವಯಂಪ್ರೇರಿತ ದೂರು ಹಾಕುವ ಮನೋಭಾವ ಕೈಬಿಡಿ. ನೈತಿಕತೆ ಇದ್ದರೆ ಕಾರ್ಯಕರ್ತರ ವಿರುದ್ಧ ಹಾಕಿರುವ ಸ್ವಯಂಪ್ರೇರಿತ ಕೇಸ್ ವಾಪಸ್ ಪಡೆಯಿರಿ ಎಂದರು.

ಪೊಲೀಸ್ ಅಧಿಕಾರಿಗಳಾಗಿದ್ದ ಕಲ್ಲಪ್ಪ ಹಂಡೀಭಾಗ, ಗಣಪತಿ ಅವರು ರಾಜಕಾರಣಿಗಳ, ಹಿರಿಯ ಪೊಲೀಸರ ಮೋಸಕ್ಕೆ, ಷಡ್ಯಂತ್ರಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಾಗ ಇದೇ ಸಿದ್ದರಾಮಯ್ಯ ಆಗ ಸಿಎಂ ಆಗಿದ್ದರು. ನಾನು ಕಾಂಗ್ರೆಸ್ ಶಾಸಕನಾಗಿದ್ದೆ. ಆತ್ಮಹತ್ಯೆ ಮಾಡಿಕೊಂಡ ಆ ಅಧಿಕಾರಿಗಳ ಪರ ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಏಕೈಕ ಶಾಸಕ ನಾನು. ಅವರ ಕುಟುಂಬಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೆ. ಹಂಡಿಭಾಗ, ಗಣಪತಿ ನನ್ನ ಸಂಬಂಧಿಕರೂ ಅಲ್ಲ, ನನ್ನ ಮತದಾರರೂ ಅಲ್ಲ. ಆದರೂ ಅವರ ನೆರವಿಗೆ ನಿಂತೆ. ನಿಮ್ಮಂಥ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾದರೆ ಮುಂದೊಂದು ದಿನ ನಿಮ್ಮನ್ನು ರಕ್ಷಿಸಲು ನಾನು ಅಥವಾ ನನ್ನಂಥವರು ಬರಬೇಕೆ ಹೊರತು ನಿಮ್ಮನ್ನು ಉಪಯೋಗಿಸಿಕೊಂಡವರು ಬರುವುದಿಲ್ಲ ಎನ್ನುವುದು ಗೊತ್ತಿರಲಿ ಎಂದರು.

ಪಕ್ಷದ ಮುಖಂಡರಾದ ಗುರುಲಿಂಗಪ್ಪಗೌಡ ಅಂಗಡಿ, ಬಿ.ಸಿ.ಬಿರಾದಾರ, ರಾಜಶೇಖರ ಡೊಳ್ಳಿ, ಎಂ.ಎಸ್.ಪಾಟೀಲ, ಮುನ್ನಾಧಣಿ ನಾಡಗೌಡ, ಕೆಂಚಪ್ಪ ಬಿರಾದಾರ, ಪ್ರಭು ಕಡಿ, ಸಂಗಮ್ಮ ದೇವರಳ್ಳಿ, ಬಾಲರಾಜ ರಡ್ಡಿ, ಪ್ರಭು ಕಡಿ, ಸೋಮನಗೌಡ ಬಿರಾದಾರ, ಬಿ.ಪಿ.ಕುಲಕರ್ಣಿ, ಚನಬಸ್ಸು ಚನ್ನಿಗಾವಿಶೆಟ್ರು, ಗೌರಮ್ಮ ಹುನಗುಂದ ಇತರರಿದ್ದರು.

ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಸಭೆ: ಬಿಜೆಪಿಯಿಂದ ನಡೆಸಲಾಗುವ ರ‌್ಯಾಲಿ, ಸಭೆ, ಸಮಾರಂಭ ಮುಂತಾದವುಗಳಿಗೆ ಪೊಲೀಸರು ದುರುದ್ದೇಶದಿಂದ ತಡೆ ಒಡ್ಡುವ ಮೂಲಕ ನಮ್ಮ ಮನೋಸ್ಥೈರ್ಯ ಕುಗ್ಗಿಸುವ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಶುಕ್ರವಾರ ನಾವು ನಡೆಸಲು ಉದ್ದೇಶಿಸಿದ್ದ ಮಂಡಲ ಕಾರ್ಯಕರ್ತರ ಬೈಕ್, ಕಾರ್ ರ‌್ಯಾಲಿ, ಸಭೆಗೆ ಪಿಎಸ್‌ಐ ಅನುಮತಿ ನಿರಾಕರಿಸಿದ್ದಾರೆ. ಮುದ್ದೇಬಿಹಾಳದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ರಾಜಕೀಯವಾಗಿ ದ್ವೇಷದ ವಾತಾವರಣವಿದೆ ಎಂದು ಕಾರಣ ನೀಡಿದ್ದಾರೆ. ದ್ವೇಷದ ವಾತಾವರಣ ಇದೆ ಎಂದು ಅವರೇ ತಿಳಿಸಿದ ಮೇಲೆ ನಮ್ಮ ಕಾರ್ಯಕರ್ತರನ್ನು ಬಲಿಪಶು ಮಾಡಲು ಇಷ್ಟವಿಲ್ಲದ ಕಾರಣ ರ‌್ಯಾಲಿ, ಸಭೆ ರದ್ದುಪಡಿಸಬೇಕಾಯಿತು. ಇದನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಗಮನಕ್ಕೆ ತಂದಾಗ ಅವರೇ ಇಲ್ಲಿಗೆ ಬಂದು ಬೃಹತ್ ರ‌್ಯಾಲಿ, ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಇದು ನಮ್ಮ ಕಾರ್ಯಕರ್ತರನ್ನು ಹುರಿದುಂಬಿಸಲು ನೆರವಾಗುತ್ತದೆ ಎಂದು ನಡಹಳ್ಳಿ ಅವರು ತಿಳಿಸಿದರು.