ಚನ್ನಗಿರಿ: ಧೃತಿಗೆಡದೆ ಭಗೀರಥನ ಹಾದಿಯಲ್ಲಿ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಯಾವುದೇ ಕೆಲಸವಾಗಲಿ ಬದ್ಧತೆಯಿಂದ ಮಾಡಿದರೆ ಸಾಧನೆ ನಮ್ಮ ಬಳಿಗೆ ಬರುತ್ತದೆ ಎಂದು ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಎ.ಎಸ್. ಬಸವರಾಜ್ ದೇವರಹಳ್ಳಿ ತಿಳಿಸಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತ ಹಾಗೂ ಉಪ್ಪಾರ ಸಮಾಜದ ಸಹಯೋಗದಲ್ಲಿ ಏರ್ಪಡಿಸಿದ್ದ ಭಗೀರಥ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿವನ ಜಡೆಯಲ್ಲಿದ್ದ ಗಂಗೆಯನ್ನು ಭೂಮಿಗೆ ತಂದ ಕೀರ್ತಿ ಭಗೀರಥ ಸಮಾಜಕ್ಕೆ ಸಲ್ಲುತ್ತದೆ. ಯಾರಾದರೂ ಕೆಲಸವನ್ನು ಸಂಪೂರ್ಣಗೊಳಿಸಿ ಯಸಶ್ಸು ಕಂಡರೆ ಇಂದಿಗೂ ಭಗೀರಥ ಪ್ರಯತ್ನ ಎಂಬ ನಾಣ್ನುಡಿಯನ್ನು ಕಾಣುತ್ತೇವೆ. ಗುರುಭಕ್ತಿ, ತಪೋನಿಷ್ಠೆ ಹಾಗೂ ಏಕಾಗ್ರತೆಯಲ್ಲಿ ಮಹರ್ಷಿ ಎಲ್ಲರಿಗೂ ಆದರ್ಶ. ಅವರು ಹಾಕಿಕೊಟ್ಟ ದಾರಿಯಲ್ಲಿ ಇಂದಿನ ಯುವಕರು ಸಾಗಬೇಕಿದೆ ಎಂದರು.
ಉಪ್ಪಾರ ಸಮಾಜದವರು ಭಗೀರಥರನ್ನು ತಮ್ಮ ಜನಾಂಗದ ಮೂಲ ಪುರುಷ ಎಂದು ಅರಾಧಿಸುತ್ತಾರೆ. ಅಂತಹ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕಿದೆ. ಕುಲಕಸುಬು ಮುಂದುವರಿಸಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಎನ್.ಜೆ. ನಾಗರಾಜ್ ಮಾತನಾಡಿ, ಕೆಲಸ ಮಾಡುವ ವಿಷಯದಲ್ಲಿ ಬದ್ಧತೆ ಇಲ್ಲದೆ ಹೋದರೆ ಸಾಧನೆ ಕಷ್ಟ. ಹಿಡಿದ ಕೆಲಸ ಪರಿಪೂರ್ಣವಾಗಿ ಸಾಧಿಸಬೇಕಾದರೆ ಭಗೀರಥರಂತೆ ಗುರಿಯನ್ನಿಟ್ಟು ಕೆಲಸ ಮಾಡಬೇಕು. ಇಲ್ಲದಿದ್ದರೆ ಸೋಲನ್ನು ಕಾಣಬೇಕಾಗುತ್ತದೆ, ರಾಜ್ಯದ ಎಲ್ಲ ಕಡೆಯಲ್ಲಿ ಉಪ್ಪಾರ ಸಮಾಜದವರು ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ಪುರಸಭಾ ಸದಸ್ಯ ನಂಜುಂಡಿ, ಸಿ.ಎಚ್.ಶ್ರೀನಿವಾಸ್, ರಾಜಣ್ಣ, ಉಪ್ಪಾರ ಸಮಾಜದ ಪ್ರಧಾನ ಕಾರ್ಯದರ್ಶಿ ಎಚ್. ಮಂಜುನಾಥ್, ಎಂಜಿಕೆ ಹನುಮಂತಪ್ಪ, ಪರಸಪ್ಪ, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಚಂದ್ರಪ್ಪ ಇದ್ದರು.