ಜಿಲ್ಲೆ

ಪಾಳು ಬಿದ್ದಿರುವ ಕೂರ್ಗ್ ವಿಲೇಜ್

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಡಿಕೇರಿ ರಾಜಾಸೀಟ್ ಬಳಿ ನಿರ್ಮಾಣ ಆಗಿರುವ ಮಹತ್ವಾಕಾಂಕ್ಷಿ ’ಕೂರ್ಗ್ ವಿಲೇಜ್’ ಪಾಳು ಬೀಳುತ್ತಿದೆ. ಕೊಡಗಿನ ಸಂಸ್ಕೃತಿ ಬಿಂಬಿಸುವ ಪಾರಂಪರಿಕ ಉತ್ಪಾದನೆಗಳು ಹಾಗೂ ಸ್ಥಳೀಯ ಉತ್ಪನ್ನಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಈ ಯೋಜನೆಗೆ ಚಾಲನೆ ನೀಡಲಾಯಿತಾದರೂ ಇಲ್ಲಿಯ ತನಕ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾಗಿ ’ಕೂರ್ಗ್ ವಿಲೇಜ್’ಗಾಗಿ ವೆಚ್ಚ ಮಾಡಿರುವ ಸುಮಾರು ೧ ಕೋಟಿ ರೂ. ಸಾರ್ವಜನಿಕ ಹಣ ವ್ಯರ್ಥವಾಗಿ ಪೋಲಾಗುವತ್ತ ಸಾಗಿದೆ.

ವರ್ಷದಿಂದ ವರ್ಷಕ್ಕೆ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಏರುತ್ತಲೇ ಇದೆ. ಪ್ರಾಕೃತಿಕ ವಿಕೋಪ ಮತ್ತು ಕೊರೊನಾ ಕಾಲಘಟ್ಟದ ನಂತರ ಇಲ್ಲಿಯ ಪ್ರವಾಸೋದ್ಯಮ ವೇಗವಾಗಿ ಚೇತರಿಕೆ ಕಾಣುತ್ತಿದ್ದು. ೨೦೨೨ಕ್ಕೆ ಹೋಲಿಸಿದರೆ ೨೦೨೩ರಲ್ಲಿ ಕೊಡಗಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.೩೮ರಷ್ಟು ಏರಿಕೆಯಾಗಿದೆ ಎನ್ನುವ ಮಾಹಿತಿ ಪ್ರವಾಸೋದ್ಯಮ ಇಲಾಖೆಯಿಂದ ಸಿಗುತ್ತಿದೆ. ೨೦೨೨ ರಲ್ಲಿ ೨೭,೨೯,೭೧೧ ಪ್ರವಾಸಿಗರು ಕೊಡಗಿಗೆ ಆಗಮಿಸಿದ್ದು, ೨೦೨೩ರಲ್ಲಿ ೪೩,೬೯,೫೦೭ ಪ್ರವಾಸಿಗರು ಜಿಲ್ಲೆಯ ಪ್ರಾಕೃತಿಕ ಶ್ರೀಮಂತಿಕೆಯನ್ನು ಕಣ್ತುಂಬಿಸಿಕೊಂಡು ಮರಳಿದ್ದಾರೆ.

೨೦೧೮ರ ಪ್ರಾಕೃತಿಕ ವಿಕೋಪ ಮತ್ತು ೨೦೧೯ರ ಕೋವಿಡ್ ಆತಂಕದ ನಂತರ ೨೦೨೩ರಲ್ಲಿ ಅತಿ ಹೆಚ್ಚು ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿ ದಾಖಲೆ ಮಾಡಿದ್ದಾರೆ. ೨೦೨೩ರ ಡಿಸೆಂಬರ್‌ನಲ್ಲಿ ೫,೮೨,೯೦೬ ಮತ್ತು ೨೦೨೪ರನ ಜನವರಿ ತಿಂಗಳ ಮೊದಲಾರ್ಧ ತನಕ ೬,೨೦,೮೦೮ ಪ್ರವಾಸಿಗರು ಕೊಡಗಿಗೆ ಆಗಮಿಸಿದ್ದು, ಇದು ಈ ವರ್ಷದ ಪ್ರವಾಸೋದ್ಯಮ ಭವಿಷ್ಯದ ಚಿತ್ರಣವನ್ನು ಈಗಲೇ ತೆರೆದಿಡುವಂತಿದೆ. ದೇಶದಲ್ಲಿ ಆನ್‌ಲೈನ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೊಡಗು ಮೂರನೇ ಸ್ಥಾನದಲ್ಲಿದೆ. ಹೀಗೆ ಪ್ರವಾಸಿ ಭೂಪಟದಲ್ಲಿ ಜನಪ್ರಿಯ ಆಗುತ್ತಿರುವ ಕೊಡಗಿನ ಬಗ್ಗೆ ಮತ್ತಷ್ಟು ಮಾಹಿತಿ ಪ್ರವಾಸಿಗರಿಗೆ ನೀಡುವ ಉದ್ದೇಶದಿಂದ ’ಕೂರ್ಗ್ ವಿಲೇಜ್’ ಪರಿಕಲ್ಪನೆ ಹುಟ್ಟಿಕೊಂಡಿತು.

ಪ್ರವಾಸಿಗರಿಗೆ ಕೊಡಗಿನ ಸಂಸ್ಕೃತಿ, ಪದ್ಧತಿ, ಪರಂಪರೆ ತಿಳಿಸುವುದರ ಜತೆಗೆ ಇಲ್ಲಿಯ ಸಾಂಪ್ರದಾಯಿಕ ತಯಾರಿಕೆಗಳು, ಕೃಷಿ ಉತ್ಪನ್ನಗಳನ್ನು ಪ್ರವಾಸಿಗರಿಗೆ ಖರೀದಿ ಮಾಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟ್‌ನಿಂದ ಸುಮಾರು ೧೧೫ ಮೀ. ದೂರದಲ್ಲಿ ’ಕೂರ್ಗ್ ವಿಲೇಜ್’ ನಿರ್ಮಿಸಲಾಗಿದೆ. ೯೮ ಲಕ್ಷ ರೂ. ವೆಚ್ಚದಲ್ಲಿ ಮಳಿಗೆಗಳನ್ನು ಕೂಡ ತಲೆಯೆತ್ತಿದ್ದು, ಜಿಲ್ಲೆಯ ಸ್ತ್ರೀ ಶಕ್ತಿ ಸಂಘಗಳು, ತೋಟಗಾರಿಕೆ ಉತ್ಪನ್ನ ಕಂಪೆನಿಗಳು, ಏಲಕ್ಕಿ, ಜೇನು ಸೇರಿದಂತೆ ಕೊಡಗಿನ ಪಾರಂಪರಿಕ ಉತ್ಪನ್ನಗಳನ್ನು ಉತ್ಪಾದಿಸುವವರಿಗೆ ಸಂಬಂಧಿಸಿದ ಸಹಕಾರ ಸಂಘಗಳಿಗೆ ಹಂಚಿಕೆ ಮಾಡಲಾಗಿದೆ.

ಇಲ್ಲಿಯ ವಾತಾವರಣವೂ ಅತ್ಯಂತ ಸುಂದರವಾಗಿದ್ದು, ’ಕೂರ್ಗ್ ವಿಲೇಜ್’ ಒಳಗಿರುವ ಪುಟ್ಟ ಕೊಳ ಆಕರ್ಷಣಿಯವಾಗಿದೆ. ಭೂ ಪ್ರದೇಶ ಕೂಡ ಪ್ರವಾಸಿಗರನ್ನು ಸೆಳೆಯುವಂತಿದೆ. ಪ್ರಕೃತಿ ನಡುವೆ ನಡೆದಾಡಿಕೊಂಡು ಪ್ರವಾಸಿಗರಿಗೆ ಕೊಡಗು ಭೇಟಿಯ ನೆನಪು ಹಸಿರಾಗಿರುವಂತೆ ಶಾಪಿಂಗ್ ಮಾಡಲು ಬೇಕಾದ ಎಲ್ಲಾ ಅವಕಾಶಗಳು ಇಲ್ಲಿದೆ. ಈಗ ಪ್ರವೇಶ ದ್ವಾರಕ್ಕೆ ಬಣ್ಣ ಬಳಿದು ಅಲಂಕಾರ ಮಾಡಲಾಗಿದ್ದು, ಕೂರ್ಗ್ ವಿಲೇಜ್ ಒಳಗೆ ಇರುವ ಮಳಿಗೆಗಳನ್ನೂ ಸ್ವಚ್ಛಗೊಳಿಸಿ ಬಣ್ಣ ಬಳಿಯಲಾಗಿದೆ. ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಯಲಾಗುತ್ತಿದೆ. ಪುಟ್ಟ ಕೊಳದ ನಿರ್ವಹಣೆಯನ್ನೂ ಮಾಡಲಾಗುತ್ತಿದೆ.
ಮುಂದಿನ ವಾರ ರಾಜಾಸೀಟ್‌ನಲ್ಲಿ ಫಲ-ಪುಷ್ಪ ಪ್ರದರ್ಶನ ಆರಂಭವಾಗಲಿದ್ದು ಈ ಸಂದರ್ಭದಲ್ಲಿ ’ಕೂರ್ಗ್ ವಿಲೇಜ್’ ಪ್ರವಾಸಿಗರಿಗೆ ತೆರೆದುಕೊಂಡರೆ ಈ ಬಗ್ಗೆ ಸೂಕ್ತ ಪ್ರಚಾರ ದೊರಕುವುದು ಮಾತ್ರವಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ. ’ಕೂರ್ಗ್ ವಿಲೇಜ್’ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದರೆ ’ಕೊಡಗಿನ ಉತ್ಪನ್ನಗಳು’ ಎನ್ನುವ ಹೆಸರಿನಲ್ಲಿ ಪ್ರವಾಸಿಗರನ್ನು ವಂಚಿಸುತ್ತಿರುವ ಜಾಲಕ್ಕೂ ಕಡಿವಾಣ ಹಾಕಬಹುದಾಗಿದೆ.

ಜಿಲ್ಲೆಯಲ್ಲಿ ಅಲ್ಲಲ್ಲಿ ಅಣಬೆಗಳಂತೆ ಹುಟ್ಟಿಕೊಂಡಿರುವ ಸಾಂಬಾರ ಪದಾರ್ಥಗಳು, ಚಾಕೋಲೇಟ್, ವೈನ್ ಮಾರಾಟ ಮಾಡುವ ಬಹುತೇಕ ಮಳಿಗೆಗಳಲ್ಲಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಉತ್ಪನ್ನಗಳು, ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಆದರೆ ’ಕೂರ್ಗ್ ವಿಲೇಜ್’ನಲ್ಲಿ ಸ್ತ್ರೀ ಶಕ್ತಿ ಸಂಘಗಳು, ಸಹಕಾರಿ ಸಂಘಗಳಿಗೆ ಮಾತ್ರ ಮಳಿಗೆಗಳನ್ನು ತೆರೆಯಲು ಅವಕಾಶ ಇದ್ದು ಅಧಿಕಾರಿಗಳ ನೇರ ನಿಗಾದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಕೊಡಗಿನ ಅಸಲಿ ಉತ್ಪನ್ನಗಳು ದೊರಕುವ ಖಾತರಿ ಇರುತ್ತದೆ.

ಕಳೆದ ವರ್ಷ ಕಾಫಿ ಮೇಳ, ಜೇನು ಮೇಳ, ವೈನ್ ಮೇಳವನ್ನು ರಾಜಾಸೀಟ್ ಮತ್ತು ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಇಂಥ ಮೇಳಗಳನ್ನು ಆಯೋಜಿಸಲು ಕೂರ್ಗ್ ವಿಲೇಜ್‌ನಲ್ಲಿ ಕೂಡ ಅವಕಾಶಗಳಿದ್ದು, ಪ್ರವಾಸಿಗರನ್ನು ಹೆಚ್ಚು ಸೆಳೆಯಬಹುದಾಗಿದೆ. ವಸ್ತು ಪ್ರದರ್ಶನ ಮಾದರಿಯ ಮೇಳಗಳನ್ನು ಆಯೋಜಿಸುವ ಮೂಲಕ ಪ್ರವಾಸಿಗರು ಮಾತ್ರವಲ್ಲದೆ ಸ್ಥಳೀಯರನ್ನೂ ಇತ್ತ ಕಡೆ ಆಕರ್ಷಿಸಬಹುದಾಗಿದೆ.
ಸುಮಾರು ೧ ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿರುವ ಕೂರ್ಗ್ ವಿಲೇಜ್ ಬಹುತೇಕ ಸರ್ಕಾರಿ ಯೋಜನೆಗಳಂತೆ ಕಾಡುಪಾಲಾಗದೆ ಸಾಧ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಉದ್ದೇಶ ಈಡೇರಿಕೆಯಲ್ಲಿ ಸಫಲವಾಗಲಿ ಎನ್ನುವುದು ಸ್ಥಳೀಯರ ಆಶಯ.