ಜಿಲ್ಲೆ

ಪೊದೆಗಳಿಂದ ಆವೃತವಾದ ರಸ್ತೆ!

ಗಂಗಾಧರ ಬಿ ವಿ

* ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ * ನಿತ್ಯ ಸಂಚಾರಕ್ಕೆ ಪರದಾಟ

ಚನ್ನಪಟ್ಟಣ

ಲೋಕಕ್ಕೆ ಉಪಯುಕ್ತವಾಗಬೇಕಾದ ಲೋಕೋಪಯೋಗಿ ಇಲಾಖೆ ತಾಲೂಕಿನಲ್ಲಿ ಅನುಪಯುಕ್ತ ಎನಿಸಿದೆ. ಇಲಾಖೆಯ ನಿರ್ಲಕ್ಷ್ಯಕ್ಕೆ ತಾಲೂಕಿನ ರಸ್ತೆಗಳು ಬಲಿಯಾಗಿದ್ದು, ಜನಸಾಮಾನ್ಯರ ಶಾಪಕ್ಕೆ ಇಲಾಖೆ ಗುರಿಯಾಗುತ್ತಿದೆ.

ಹೌದು, ಮೂಲ ಸೌಲಭ್ಯಗಳಲ್ಲಿ ರಸ್ತೆಯೇ ಪ್ರಮುಖ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲು ಸಂಪರ್ಕ ಸೇತುವೆಗಳಾದ ರಸ್ತೆಗಳಿಗೆ ಅಪಾರ ಪ್ರಾಮುಖ್ಯ ಇದೆ. ಅದರಲ್ಲೂ ಗ್ರಾಮೀಣ ರಸ್ತೆಗಳು ಅಭಿವೃದ್ಧಿಯ ದ್ಯೋತಕ ಎಂದರೆ ತಪ್ಪಾಗಲಾರದು. ಆದರೆ, ತಾಲೂಕಿನಲ್ಲಿ ಮಾತ್ರ ಲೋಕೋಪಯೋಗಿ ಇಲಾಖೆಯ ರ್ನಿಲ್ಯ ಹಾಗೂ ಬೇಜವಾಬ್ದಾರಿಗೆ ತಾಲೂಕಿನ ಹಲವು ರಸ್ತೆಗಳು ಅವ್ಯವಸ್ಥೆಯ ಆಗರವಾಗಿವೆ.

ನಿರ್ವಹಣೆ ಕೊರತೆಗೆ ಬಲಿ!

ಎಚ್​.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಗೆ ಕೋಟ್ಯಂತರ ರೂ. ಅನುದಾನ ನೀಡಿದ್ದರು. ತದನಂತರ ಬಿಜೆಪಿ ಸರ್ಕಾರದಿಂದಲೂ ಸಾಕಷ್ಟು ಅನುದಾನ ಕೊಡಿಸಿದ್ದರು. ಪ್ರಸ್ತುತ ಕಾಂಗ್ರೆಸ್​ ಸರ್ಕಾರವೂ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದೆ. ಇದರಿಂದ  ಕ್ಷೇತ್ರದ ಮೂಲೆ ಮೂಲೆಯ ರಸ್ತೆಗಳೂ ಡಾಂಬರು ಕಾಣುವಂತಾಗಿವೆ. ಆದರೆ, ಈ ರಸ್ತೆಗಳ ನಿರ್ವಹಣೆ ಮಾಡಲು ಇಲಾಖೆ ವಿಫಲಗೊಂಡಿದ್ದು, ತಾಲೂಕಿನ ಹಲವು ರಸ್ತೆಗಳು ಅವ್ಯವಸ್ಥೆಯ ಆಗರವಾಗಿವೆ. ಕಾಮಗಾರಿ ವೇಳೆ ಗುಣಮಟ್ಟ ಕಾಯ್ದುಕೊಳ್ಳದ ಪರಿಣಾಮ ರಸ್ತೆಗಳು ಗುಂಡಿಮಯವಾಗಿದ್ದು, ವಾಹನ ಸವಾರರು ಈ ರಸ್ತೆಗಳಲ್ಲಿ ಸಂಚರಿಸಲು ತ್ರಾಸಪಡಬೇಕಾಗಿದೆ.

ಗುಂಡಿಯಲ್ಲಿ ರಸ್ತೆ ಹುಡುಕುವ ಸ್ಥಿತಿ

ತಾಲೂಕಿನ ಹಲವು ರಸ್ತೆಗಳು ಗುಂಡಿಮಯವಾಗಿವೆ. ಇದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸಿರುವ ಸಾಕಷ್ಟು ಉದಾಹರಣೆಗಳಿವೆ. ಕೆಲವು ಕಡೆ ಕಳಪೆ ಕಾಮಗಾರಿಯಿಂದ ಈ ಸ್ಥಿತಿ ನಿರ್ಮಾಣವಾಗಿದ್ದರೆ, ಇನ್ನು ಕೆಲವೆಡೆ ನಿರ್ವಹಣೆ ಕೊರತೆಯಿಂದ ರಸ್ತೆಗಳು ಗುಂಡಿಮಯವಾಗಿವೆ. ಇನ್ನೂ ರಸ್ತೆಗಳ ಅಕ್ಕಪಕ್ಕದ ಜಂಗಲ್​ ಕ್ಲಿನಿಂಗ್​ (ಗಿಡಗಂಟಿಗಳ ತೆರವು) ಮಾಡದಿರುವುದು ಸಾಕಷ್ಟು ಸಂಚಾರ ಸಮಸ್ಯೆಗೆ ಕಾರಣವಾಗಿದೆ.

ರಸ್ತೆಗಳ ಅಕ್ಕಪಕ್ಕದಲ್ಲಿ ದೊಡ್ಡಪ್ರಮಾಣದ ಗಿಡ ಗಂಟಿ ಬೆಳೆದು, ರಸ್ತೆಗೆ ಚಾಚಿಕೊಂಡಿವೆ. ರಸ್ತೆ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನ ಕಾಣದ ಸ್ಥಿತಿ ಹಲವು ರಸ್ತೆಗಳಲ್ಲಿ ಇದೆ. ಜಂಗಲ್​ ಸ್ವಚ್ಛಗೊಳಿಸಲು ಇಲಾಖೆ ಮರೆತಿದೆಯೇ ಎಂಬ ಅನುಮಾನ ಮೂಡಿದೆ. ರಸ್ತೆಗಳ ಜಂಗಲ್​ ಕ್ಲಿನಿಂಗ್​ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಹರಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಕೂಡ್ಲೂರು ಕೆರೆ ಏರಿಯ ಮೇಲೆ ಬೆಳೆದು ನಿಂತಿರುವ ಗಿಡಗಂಟಿಗಳು ಇದಕ್ಕೆ ಉದಾಹರಣೆಯಾಗಿದೆ.

ಚನ್ನಪಟ್ಟಣ ಹಾಗೂ ಗರಕಹಳ್ಳಿ ರಸ್ತೆಯಲ್ಲಿ ಸಾಕಷ್ಟು ಗಿಡಗ&ಗಂಟಿ ಬೆಳೆದು ನಿಂತಿದೆ. ಇದರೊಂದಿಗೆ ಈ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದ ಗುಂಡಿಗಳು ನಿರ್ಮಾಣವಾಗಿವೆ. ಗುಂಡಿಗಳಿಂದಾಗಿ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕೂಡ್ಲೂರು ಕೆರೆ ಏರಿ ರಸ್ತೆಯಲ್ಲಿ ಗಿಡಗಂಟಿಗಳು ರಸ್ತೆಗೆ ಚಾಚಿರುವ ಹಿನ್ನೆಲೆಯಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಬೇಕು.ಪ್ರಮೋದ್​, ವಾಲೆತೋಪು ನಿವಾಸಿ.ನಮ್ಮ ಇಲಾಖೆಗೆ ಒಳಪಡುವ ತಾಲೂಕಿನ ರಸ್ತೆಗಳ ಜಂಗಲ್​ ಕ್ಲಿನಿಂಗ್​ ಮತ್ತು ಗುಂಡಿಮುಚ್ಚಲು ಈಗಾಗಲೇ ಟೆಂಡರ್​ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗಾಗಲೇ ಕೆಲವೆಡೆ ಕೆಲಸ ಆರಂಭಿಸಲಾಗಿದೆ. ಎಲ್ಲ ರಸ್ತೆಗಳಲ್ಲಿನ ಜಂಗಲ್​ ತೆರವು ಹಾಗೂ ಗುಂಡಿ ಮುಚ್ಚಲು ಕ್ರಮಕೈಗೊಳ್ಳುತ್ತೇವೆ.ಮಹದೇವಪ್ಪ, ಇಇ, ಲೋಕೋಪಯೋಗಿ ಇಲಾಖೆ

===