ಜಿಲ್ಲೆ

ಮಂಡ್ಯದಲ್ಲಿ ಪಾಲಿಶ್​ ಅಕ್ಕಿ ದಂಧೆ? ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ, 100 ಟನ್​ ಪಡಿತರ ಅಕ್ಕಿ ವಶ

arunakunigal

ಮಂಡ್ಯ: ಮಂಡ್ಯದಲ್ಲಿ ಪಡಿತರ ಅಕ್ಕಿಯನ್ನು ಪಾಲಿಶ್​ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರಬಹುದೆಂಬ ಅನುಮಾನ ಮೂಡಿದೆ. ಇದಕ್ಕೆ ಪೂರಕವೆಂಬಂತೆ ಮೊನ್ನೆ ರಾತ್ರಿ (ಶನಿವಾರ) ತಹಸೀಲ್ದಾರ್​ ಚಂದ್ರಶೇಖರ ಶಂ.ಗಾಳಿ ನೇತೃತ್ವದ ತಂಡ ಬರೋಬ್ಬರಿ 100 ಟನ್​ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದೆ.

ಪಡಿತರ ಅಕ್ಕಿಯನ್ನು ಪಾಲಿಶ್​ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ದಂಧೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರಬಹುದೆಂದು ಸಂಶಯ ವ್ಯಕ್ತಪಡಿಸಲಾಗಿದೆ. ಹೊರ ರಾಜ್ಯದಿಂದ ಅಥವಾ ಕರ್ನಾಟಕದಲ್ಲಿಯೇ ಪಡಿತರ ಅಕ್ಕಿಯನ್ನು ಫಲಾನುಭವಿಗಳಿಂದ ಖರೀದಿಸಿ ಮಂಡ್ಯಕ್ಕೆ ತಂದು ಪಾಲಿಶ್​ ಮಾಡಿ 10ಕ್ಕೂ ಹೆಚ್ಚು ಬ್ರಾಂಡ್​ ಮೂಲಕ ಆಫ್ರಿಕಾ, ಮಲೇಶಿಯಾ ಹಾಗೂ ಅರಬ್​ ರಾಷ್ಟ್ರಗಳಿಗೆ ಮಾರಾಟ ಮಾಡುತ್ತಿರಬಹುದೆಂದು ಶಂಕಿಸಲಾಗಿದೆ.

ಆಂಧ್ರಪ್ರದೇಶದ ವಿಜಯವಾಡದಿಂದ ಮಂಡ್ಯ ನಗರಕ್ಕೆ ಶನಿವಾರ ರಾತ್ರಿ ಬಂದಿದ್ದ ಅಂದಾಜು 100 ಟನ್​ ಪಡಿತರ ಅಕ್ಕಿ ತುಂಬಿದ್ದ ಮೂರು ಲಾರಿಗಳನ್ನು ತಹಸೀಲ್ದಾರ್​ ನೇತೃತ್ವದ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಲಾರಿಗಳನ್ನು ಹಿಂಬಾಲಿಸಿ ಹೋದಾಗ ನಗರ ಹೊರವಲಯದ ಕಿರಗಂದೂರು ಸಮೀಪದ ರೈಸ್​ಮಿಲ್​ವೊಂದಕ್ಕೆ ತೆರಳಿವೆ. ಅದೇ ವೇಳೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

ಲಾರಿಗಳನ್ನು ಪರಿಶೀಲಿಸಿದಾಗ ಪಡಿತರ ಅಕ್ಕಿ ತುಂಬಿದ್ದ ಚೀಲಗಳಿರುವುದು ಪತ್ತೆಯಾಗಿದೆ. ಮೂರು ಲಾರಿಗಳಲ್ಲಿ ಒಟ್ಟು 100 ಟನ್​ ಅಕ್ಕಿ ಇರಬಹುದೆಂದು ಅಂದಾಜಿಸಿ, ಲಾರಿಗಳನ್ನು ಸೀಜ್​ ಮಾಡಲಾಗಿದೆ. ಆರ್​ಎಪಿಸಿಎಂಎಸ್​ ಗೋದಾಮಿನಲ್ಲಿ ಅಕ್ಕಿಯನ್ನು ದಾಸ್ತಾನು ಮಾಡಿ ವಾಹನಗಳನ್ನು ಮಂಡ್ಯ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಜಂಟಿ ನಿರ್ದೇಶಕಿ ಜಿ.ಸೌಮ್ಯಾ ದೂರು ನೀಡಿದ್ದಾರೆ.