ಬೆಂಗಳೂರು:ಮಹಾಪುರುಷನಾದ ಜಗದ್ಗುರು ಬಸವಣ್ಣ, ಕ್ರಾಂತಿಕಾರಿ ಮತ್ತು ಸಮಾಜದ ಸುಧಾರಕರು. ನಾವೆಲ್ಲರೂ ಅವರ ಅನುಯಾಯಿಗಳು. ಪ್ರಸ್ತುತ ಸಮಾಜಕ್ಕೆ ಅಂತಹ ಗುಣವುಳ್ಳವರ ಅಗತ್ಯವಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.
ಬಸವ ವೇದಿಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ "ಬಸವ ಜಯಂತಿ' ಹಾಗೂ "ಬಸವಶ್ರೀ' ಮತ್ತು "ವಚನ ಸಾಹಿತ್ಯಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಬಸವಣ್ಣನವರ ಕೀರ್ತಿ, ತತ್ತ್ವ ಆಧುನಿಕ ಯುವಮನಸ್ಸುಗಳಿಗೆ ಪರಿಣಾಮಕಾರಿಯಾಗಿ ತಲುಪಬೇಕಿದೆ. ಬಸವಣ್ಣ ಆ ಕಾಲದ ಕಲುಷಿತ ವಾತಾವರಣ ಮೀರಿ ಶೋಷಿತ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದರು. ವಿಚಾರವಾದಿಯಾಗಿದ್ದರು, ಭಕ್ತಿ ಅಳವಡಿಸಿಕೊಂಡು ದಾರ್ಶನಿಕರಾಗಿದ್ದವರು. ಆರೇಳು ಸಾವಿರ ವರ್ಷಗಳ ಹಿಂದೆ ಬದುಕಿ ಮಾದರಿಯಾಗಿ ಆಡಳಿತ ನಡೆಸಿದ್ದವರು ಎಂದು ಬಣ್ಣಿಸಿದರು.
ರೈಲ್ವೆ ಇಲಾಖೆ ಸಹಯೋಗದಲ್ಲಿ 2027ಕ್ಕೆ ದೆಹಲಿಯ ಸಂಸತ್ತಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ "ಬಸವ ಜಯಂತಿ' ಕಾರ್ಯಕ್ರಮಕ್ಕೆ ಎಲ್ಲ ಸಹಕಾರ ನೀಡಲಾಗುವುದು. ಈ ದಿಸೆಯಲ್ಲಿ ಜಗದ್ಗುರು ಬಸವಣ್ಣನವರ ವಿಚಾರಧಾರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ದೇಶ ಕಂಡ ಅಪರೂಪದ ಕಾಯಕ ಯೋಗಿ, ಮಹಾತಪಸ್ವಿ ಬಸವಣ್ಣನವರ ವಿಚಾರಧಾರೆಯನ್ನು ಇನ್ನಷ್ಟು ಅಳವಡಿಸಿಕೊಂಡು ಕೆಲಸ ಮಾಡುವ ಅಗತ್ಯವಿದೆ. ಜಾತಿ, ವರ್ಗರಹಿತ ಸಮಾಜದ ಕಲ್ಪನೆಯನ್ನು ಜಗತ್ತಿಗೆ ತೋರಿಸಿದ್ದರು. ಶೋಷಿತ ವರ್ಗ ಮತ್ತು ಮಹಿಳೆಯರ ಉದ್ಧಾರಕ್ಕಾಗಿ ಶ್ರಮಿಸಿದ್ದರು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಸಮಾಜದ ಏಳ್ಗೆಗಾಗಿ ರಚಿಸಿದ್ದ ಅಂದಿನ "ಅನುಭವ ಮಂಟಪ'ದ ಕಾರ್ಯವೈಖರಿ ಇಂದಿನ ಸಂಸತ್ತಿನ ಕಾರ್ಯವೈಖರಿ ಪರಸ್ಪರ ಒಂದೇ ರೀತಿಯಲ್ಲಿವೆ. ಬಸವಣ್ಣ ಸಾರಥ್ಯದಲ್ಲಿ ನಡೆದ ಸುಧಾರಣೆ ಪ್ರಯತ್ನ ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಅನುಭವ ಮಂಟಪದ ವೇದಿಕೆಯೇ ಈಗಿನ ಸಂಸತ್ತು ಆಗಿದೆ ಎಂದರು.ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪಗೆ "ಬಸವಶ್ರೀ' ಪ್ರಶಸ್ತಿ, ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ಹಾಗೂ ಗಾಯಕಿ ಎಂ.ಡಿ. ಪಲ್ಲವಿ ಅವರಿಗೆ "ವಚನ ಸಾಹಿತ್ಯಶ್ರೀ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ "ಬಸವಜ್ಯೋತಿ' ಸಂಚಿಕೆ ಬಿಡುಗಡೆ ಮಾಡಲಾಯಿತು. ವಿವಿಧ ಬೇಡಿಕೆ ಈಡೇರಿಸುವಂತೆ ಕೋರಿ ಬಸವ ವೇದಿಕೆ ಪದಾಧಿಕಾರಿಗಳು, ಸಚಿವ ಎಂ.ಬಿ. ಪಾಟೀಲ್ಗೆ ಮನವಿ ಪತ್ರ ಸಲ್ಲಿಸಿದರು. ರಂಗಕರ್ಮಿ ನಾಗರಾಜಮೂರ್ತಿ ಸೇರಿ ಮತ್ತಿತರರಿದ್ದರು.
ವಿಸ್ಮಯ ವ್ಯಕ್ತಿ: ಬಸವಣ್ಣ ಒಬ್ಬ ವಿಸ್ಮಯ ವ್ಯಕ್ತಿ. ಇವರು ಅಂದಿಗೂ ಇಂದಿಗೂ ಎಂದಿಗೂ ಪ್ರಸ್ತುತ. ಐಕ್ಯವಾದರೂ ಇವರ ವಿಚಾರಧಾರೆಗಳು ಸದಾ ಕಾಲ ಪ್ರಸ್ತುತವಾಗಿವೆ. ಅಸಮಾನತೆ, ಶೋಷಣೆ ಮತ್ತು ಮೂಢನಂಬಿಕೆ ವಿರುದ್ಧ ಹೋರಾಟ ಮಾಡಿದ್ದರು. ಇವತ್ತು ಸಮಾಜದಲ್ಲಿ ನಡೆಯುತ್ತಿರುವ ಟನೆಗಳು ನೋಡಿದರೆ ಬಸವಣ್ಣನವರಿಗೆ ಎಷ್ಟು ನ್ಯಾಯ ಕೊಟ್ಟಿದ್ದೇವೆ ಎಂಬುದನ್ನೂ ನಾವೆಲ್ಲರೂ ಆತ್ಮಲೋಕನ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಧರ್ಮದ ಹೆಸರಿನಲ್ಲಿ ಇವತ್ತು ಹಿಂಸೆ ನಡೆಯುತ್ತಿದೆ. ಮನುಷ್ಯರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಬೇಕು. ಭೋಗದ ಜಗತ್ತಿನಲ್ಲಿ ತ್ಯಾಗ ಮಾಡುವುದು ಮುಖ್ಯವಲ್ಲ. ಆದರೆ, ಮನದಾಳದ ಮಾತನ್ನು ಜಗತ್ತಿಗೆ ಹಂಚಿಕೊಂಡರೆ ಮಾತ್ರ ತ್ಯಾಗ ಮತ್ತು ಪ್ರಾಮಾಣಿಕತೆಯ ಮಹತ್ವ ಗೊತ್ತಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ಬಸವಣ್ಣನ ತತ್ತ$್ವದ ಹಾದಿಯಲ್ಲಿ ರಾಷ್ಟ್ರವನ್ನು ಕೊಂಡೊಯ್ಯುತ್ತಿದ್ದಾರೆ. ಸಂಸತ್ತಿನಲ್ಲಿ ವಚನ ಬರೆಸಿ ಅದರ ಮಹತ್ವವನ್ನು ಇತರರಿಗೂ ತಿಳಿಸಿದ್ದಾರೆ. ಈ ಮೂಲಕ ಬಸವಣ್ಣನವರ ತತ್ವಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಮೋದಿ ಆಧುನಿಕ ಕಾಯಕ ಯೋಗಿ. ಸಿದ್ಧಗಂಗಾ ಮಠ ಮತ್ತು ಆದಿಚುಂಚನಗಿರಿ ಮಠ ದೇಶಕ್ಕೆ ತನ್ನದೆ ಆದ ಕೊಡುಗೆ ಕೊಟ್ಟಿವೆ.
| ವಿ. ಸೋಮಣ್ಣ. ಕೇಂದ್ರ ಸಚಿವ.