module: a; hw-remosaic: 0; touch: (0.47777778, 0.47777778); modeInfo: ; sceneMode: Auto; cct_value: 0; AI_Scene: (-1, -1); aec_lux: 75.0; hist255: 0.0; hist252~255: 0.0; hist0~25: 0.0; 
ಜಿಲ್ಲೆ

ಗ್ಯಾಸ್ಟ್ರೋಎಂಟ್ರಾಲಜಿಯಲ್ಲಿ ಕ್ರಾಂತಿಕಾರಿ ಬದಲಾವಣೆ

ಮರಿದೇವ ಹೂಗಾರ

ಹುಬ್ಬಳ್ಳಿ: ಮೊದಲು ಏನೇ ಆದರೂ ಬೇರೆ ಜಿಲ್ಲೆಗಳಿಗೆ ರೋಗಿಗಳನ್ನು ಕಳುಹಿಸಬೇಕಾಗಿತ್ತು. ಈಗ ಗ್ಯಾಸ್ಟ್ರೋಎಂಟ್ರಾಲಜಿಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ನಮ್ಮಲ್ಲಿಯೇ ಈ ವಿಭಾಗದಲ್ಲಿ ಎಂಸಿಎಚ್ ವಿದ್ಯಾರ್ಥಿಗಳಿದ್ದಾರೆ ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ಬಣ್ಣಿಸಿದರು.

ಇಲ್ಲಿಯ ಕೆಎಂಸಿಆರ್‌ಐ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ಅಸೋಸಿಯೇಷನ್ ಆಫ್ ಸರ್ಜಿಕಲ್ ಗ್ಯಾಸ್ಟ್ರೋಎಂಟ್ರಾಲಾಜಿಸ್ಟ್ಸ್ ಆ್ಯಂಡ್ ಜಿಐ ಆಂಕೋಸರ್ಜನ್ಸ್‌ನ (ಕ್ಯಾಸ್ಗೋ) 4ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕೆಎಂಸಿಆರ್‌ಐನಲ್ಲಿ ಮೊದಲು ಎಂಸಿಎಚ್ (ಸೂಪರ್ ಸ್ಪೆಷಾಲಿಟಿ ಸ್ನಾತಕೋತ್ತರ ಪದವಿ) ವ್ಯಾಸಂಗವಿರಲಿಲ್ಲ. ಮೊದಲು ತಜ್ಞರ ತಂಡ ಬಂದು ಇಲ್ಲಿಯ ಬೋಧಕರು ಮತ್ತು ಸವಲತ್ತು ಪರಿಶೀಲಿಸಿತ್ತು. ಅವರಿಗೆ ಅಸಮರ್ಪಕವೆನಿಸಿ ಅನುಮತಿ ನೀಡಿರಲಿಲ್ಲ. ಮತ್ತೊಮ್ಮೆ ಬಂದಾಗ ಇಲ್ಲಿಯ ಸವಲತ್ತು, ಬೋಧಕ ಸಿಬ್ಬಂದಿ ನೋಡಿ ಅನುಮತಿಸಿದೆ. ಇದರಿಂದ ಈ ಭಾಗದ ರೋಗಿಗಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.

ನಾನು ಇದೇ ಕಾಲೇಜ್‌ನ ವಿದ್ಯಾರ್ಥಿಯಾಗಿ ಈಗ ನಿರ್ದೇಶಕನಾಗಿದ್ದೇನೆ. ನನಗೆ ಈ ಕಾಲೇಜ್ ಕೊಟ್ಟದ್ದನ್ನು ಮರಳಿ ಕೊಡುವ ಅವಕಾಶ ಸಿಕ್ಕಿದೆ. ಕೆಎಂಸಿಆರ್‌ಐ ಕಾಲೇಜ್ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸಲಾಗುವುದು. ನನ್ನ ಕೈಯಲ್ಲಿ ಕಲಿತವರು ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಶಿಕ್ಷಕನಿಗೆ ಇದಕ್ಕಿಂತ ದೊಡ್ಡ ಭಾಗ್ಯ ಯಾವುದುಂಟು? ಎಂದು ಸ್ಮರಿಸಿದರು.

ಕ್ಯಾಸ್ಗೋ ಕಾರ್ಯದರ್ಶಿ ಡಾ. ಸುನೀಲ ಶೆನ್ವಿ ಮಾತನಾಡಿ, ಈ ಮೊದಲು ನಮ್ಮ ಸಂಘದಲ್ಲಿ 50 ಸದಸ್ಯರು ಇದ್ದರು. ಈಗ 120 ಜನರು ಇದ್ದಾರೆ. 150 ಜನರು ಹೆಸರು ನೋಂದಾಯಿಸಿದ್ದಾರೆ. ಸಂಘವು ಉತ್ತರೋತ್ತರವಾಗಿ ಬೆಳೆಯುತ್ತಿದೆ. ಸಂಘದಿಂದ ಜಿಲ್ಲಾದ್ಯಂತ ವಿವಿಧ ತರಬೇತಿ, ಕಾರ್ಯಾಗಾರ ಏರ್ಪಡಿಸುವ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಲಿವರ್ ಕಸಿ ತಜ್ಞ ಡಾ. ಸಂಜಯ ಗೌಳಿ ಉಪನ್ಯಾಸ ನೀಡಿದರು.

ಕ್ಯಾಸ್ಗೋ ಅಧ್ಯಕ್ಷ ಡಾ. ಲೋಕೇಶ ಎಚ್.ಎಂ. ಅಧ್ಯಕ್ಷತೆ ವಹಿಸಿದ್ದರು.

ಬೆಳಗ್ಗೆಯಿಂದ ತಜ್ಞರು, ಗ್ಯಾಸ್ಟ್ರೋಎಂಟ್ರಾಲಜಿ ಶಸ್ತ್ರಚಿಕಿತ್ಸೆ ಕುರಿತು ವಿಶೇಷ ಉಪನ್ಯಾಸ ಮಂಡಿಸಿದರು.

ಆರ್ಗನೈಜಿಂಗ್ ಚೇರ್ಮನ್ ಡಾ.ಕೆ. ಅರವಿಂದ, ಕೋ ಚೇರ್ಮನ್ ಡಾ. ಸುಹಾಸ ಕಲಘಟಗಿ, ಕಾರ್ಯದರ್ಶಿ ಡಾ. ಶ್ರೀಶೈಲ ಚಿನಿವಾಲರ, ಪ್ರಮುಖರಾದ ಡಾ. ಅಶ್ವಿನಿಕುಮಾರ ಕುದರಿ, ಡಾ. ಲೋಹಿತ ಯು., ಡಾ. ನಿಖಿಲ್ ಶೆಳ್ಳಗಿ, ಡಾ. ಅರುಣ ಯಳಮಲಿ, ಡಾ. ಮುಕುಂದ ಕುಲಕರ್ಣಿ, ಡಾ. ರಾಘವೇಂದ್ರ ಹಾವಣ್ಣವರ, ಡಾ. ಸುರ್ದಶನ ಚೌಗಲೆ ಇತರರು ಭಾಗವಹಿಸಿದ್ದರು.