ಶಿವಮೊಗ್ಗ: ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ಕೂಡಲೇ ರದ್ದು ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಸಾಧು, ಸಂತರ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಯಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ವಕ್ಫ್ ಆಸ್ತಿ ಎಂದು ರೈತರಿಗೆ ನೀಡಿರುವ ನೋಟಿಸ್‌ಗಳನ್ನು ಹಿಂಪಡೆಯಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ನೋಟಿಸ್ ಹಿಂಪಡೆಯುವುದು ಮುಖ್ಯವಲ್ಲ. ನೋಟಿಸ್‌ಗಳಿಗೆ ಯಾವುದೇ ಬೆಲೆಯೂ ಇಲ್ಲ. ಮುಖ್ಯವಾಗಿ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ಮೊದಲು ರದ್ದುಗೊಳಿಸಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಬಾಲ ಹಿಡಿದುಕೊಂಡು ಹೋದರೆ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳುವರು. ರೈತರು, ಸಾಧುಸಂತರ ಶಾಪಕ್ಕೆ ಸಿಎಂ ಗುರಿಯಾಗಬೇಕಾಗುತ್ತದೆ. ಹಿಂದುಗಳು, ಮಠಮಂದಿರಗಳ ಆಸ್ತಿ ಉಳಿಸಲು ಸಾಧು, ಸಂತರ ನೇತೃತ್ವದಲ್ಲಿ ಹೋರಾಟ ನಡೆಸಲಿದ್ದು ಇನ್ಮುಂದೆ ಹಿಂದು ಸಮಾಜ ಸುಮ್ಮನೆ ಕೂರುವುದಿಲ್ಲ. ಹಾವೇರಿ ಜಿಲ್ಲೆಯ ಕಡಕೋಳು ಗ್ರಾಮದಲ್ಲಿ ಮುಸ್ಲಿಮರ ಮನೆಗಳ ಮೇಲೆ ಕಲ್ಲು ಹೊಡೆದಿರುವ ಬೆಳವಣಿಗೆ ಆರಂಭವಾಗಿದ್ದು ರಕ್ತಕ್ರಾಂತಿ ಆಗದಂತೆ ಸಿಎಂ ತಡೆಯಬೇಕು ಎಂದು ಎಚ್ಚರಿಕೆ ನೀಡಿದರು.
ವಕ್ಫ್ ಆಸ್ತಿ ಎಂದು ರೈತರ ಭೂಮಿ ಕಬಳಿಸಿ ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ. ಹಾಗಾಗಿ ವಕ್ಫ್‌ಗೆ ಇರುವ ಪರಮೋಚ್ಚ ಅಧಿಕಾರವನ್ನು ಹಿಂದಕ್ಕೆ ಪಡೆಯಬೇಕೆಂದು ಕೇಂದ್ರ ಸರ್ಕಾರದ ಸಮಿತಿಗೆ ಪತ್ರ ಬರೆಯುತ್ತೇನೆ ಎಂದ ಅವರು, ವಕ್ಫ್ ಮಸೂದೆಯನ್ನೇ ಸಂಸತ್‌ನಲ್ಲಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆ ಮಾಜಿ ಸದಸ್ಯ ಇ.ವಿಶ್ವಾಸ್, ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಶಂಕರನಾಯ್ಕ, ಎಸ್.ಜಿ.ಬಾಲು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.