ರಾಮನಗರ: ತೆಂಗು, ಮಾವು, ಅಡಿಕೆ ತೋಟದ ಬೆಳೆಗಳ ಜತೆ ಉಪಕಸುಬಾಗಿ ಮೇಕೆ, ನಾಟಿ ಕೋಳಿ ಸಾಕಣೆ ಮೂಲಕ ಯಶಸ್ಸು ಕಾಣುತ್ತಿರುವ ನಿವೃತ್ತ ಸರ್ಕಾರಿ ನೌಕರರೊಬ್ಬರು ಮಾದರಿ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ.
ಹೌದು... ರಾಮನಗರ ತಾಲೂಕಿನ ಕೂಟಗಲ್ ಹೋಬಳಿಯ ಜಾಲಮಂಗಲದ ರೈತ ನಂಜುಂಡಯ್ಯ ಅವರು ನಿವೃತ್ತಿ ನಂತರ ವಿಶ್ರಾಂತಿ ಜೀವನಕ್ಕೆ ಮೊರೆಹೋಗದೆ, ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿಯಲ್ಲಿ ಲಾಭವಿದೆ ಎಂಬುದನ್ನು ನಿರೂಪಿಸುವತ್ತ ಮುಂದಾಗಿದ್ದಾರೆ. ವಂಶಪಾರಂಪರ್ಯವಾಗಿ ಬಂದ 25 ಎಕರೆ ಕೃಷಿ ಭೂಮಿಯಲ್ಲಿ ಮಿಶ್ರ ಕೃಷಿ ಕೈಗೊಂಡಿದ್ದು, ವಾರ್ಷಿಕ 5 ಲಕ್ಷ ರೂ.ವರೆಗೆ ಆದಾಯ ಪಡೆಯುತ್ತಿದ್ದಾರೆ.
ಒಂದು ಬಾರಿ ಬೆಳೆ ತೆಗೆದರೆ ಮತ್ತೆ ಅದೇ ಜಾಗದಲ್ಲಿ ಬೇರೊಂದು ಬೆಳೆ ಬೆಳೆಯುವ ಮೂಲಕ ಭೂಮಿ ಫಲವತ್ತತೆಗೆ ಒತ್ತು ನೀಡಿದ್ದಾರೆ. ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ ತೋಟದಲ್ಲಿ ಬೆಳೆದ ಕಳೆ ಹುಲ್ಲನ್ನು ಉಳುಮೆ ಮಾಡಿ ಗೊಬ್ಬರ ತಯಾರಿಸುತ್ತಾರೆ. ಜತೆಗೆ ಕುರಿ ಗೊಬ್ಬರದೊಂದಿಗೆ ತರಗೆಲೆ, ಮಣ್ಣು ಮಿಶ್ರಣ ಮಾಡಿ ಗೊಬ್ಬರ ಮಾಗಿದ ನಂತರ ತೋಟದ ಬೆಳೆಗಳಿಗೆ ಬಳಸುತ್ತಾರೆ.
ಜಮೀನಿನಲ್ಲಿ ದೊಡ್ಡದಾದ ಒಂದು ಕೃಷಿಹೊಂಡ ನಿರ್ಮಿಸಿದ್ದಾರೆ. ಜಮೀನಿನಲ್ಲಿ ಮೂರು ಬೋರ್‌ವೆಲ್ ಇದ್ದು, ವಿದ್ಯುತ್ ಮೂಲಕ ಕೃಷಿಹೊಂಡಕ್ಕೆ ನೀರು ಶೇಖರಣೆ ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ, ಹನಿ ನೀರಾವರಿ ಪದ್ಧತಿ ಅನುಸರಿಸಿ ನೀರಿನ ಬವಣೆ ನೀಗಿಸಿಕೊಂಡಿದ್ದಾರೆ.
200 ತೆಂಗು, 300 ಹೊಸದಾಗಿ ನಾಟಿ ಮಾಡಿದ ತೆಂಗಿನ ಸಸಿ, 800 ಅಡಿಕೆ ಗಿಡ, 200 ಬಾದಾಮಿ, ತೋತಾಪುರಿ ಮಾವು, ಮಲ್ಲಿಕಾ 100 ಮಾವಿನ ಗಿಡಗಳಿವೆ. ಇದರ ಜತೆಗೆ ಅರಣ್ಯ ಕೃಷಿಯ 400 ಮಹಾಗನಿ, 2 ಸಾವಿರ ಶ್ರೀಗಂಧ ಹಾಗೂ ರಕ್ತಚಂದನ, 100 ಜಾಯಿಕಾಯಿ ಗಿಡಗಳನ್ನು ಬೆಳೆದಿದ್ದಾರೆ. ಮಂಗಳೂರು, ಶಿವಮೊಗ್ಗ, ದೊಡ್ಡಬಳ್ಳಾಪುರ ಕಡೆಗಳಿಂದ ಮರೀಗೌಡ, ಸಿದ್ದು ಮತ್ತಿತರ ತಳಿಯ ಸುಮಾರು 75 ಹಲಸಿನ ಗಿಡಗಳನ್ನು ಬೆಳೆಸಿದ್ದಾರೆ. ಪ್ರಸ್ತುತ 50 ಮರಗಳು ಫಸಲು ನೀಡುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.
ವಾಣಿಜ್ಯ ಬೆಳೆಯಾಗಿ ಮಾವು ಬೆಳೆಯುತ್ತಿರುವ ನಂಜುಂಡಯ್ಯ ಕೊಯ್ಲು ಮಾಡಿದ ಬಳಿಕ ತಾವೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಾರೆ. ಇನ್ನು ಮಿನಿ ಟ್ರ್ಯಾಕ್ಟರ್‌ನಲ್ಲಿ ತಾವೇ ಉಳುಮೆ ಮಾಡುವ ಮೂಲಕ ಕೂಲಿ ಕಾರ್ಮಿಕರ ಕೊರತೆ ನೀಗಿಸಿಕೊಂಡಿದ್ದಾರೆ. ಕುಟುಂಬದವರು ಇವರ ಕೃಷಿ ಕಾರ್ಯಗಳಿಗೆ ಕೈಜೋಡಿಸಿದ್ದಾರೆ. ಇನ್ನು ತೋಟದಲ್ಲೇ ಮನೆ ನಿರ್ಮಿಸಿಕೊಂಡಿದ್ದಾರೆ. ನೂರಾರು ಮೇಕೆ, ನಾಟಿ ಕೋಳಿ ಸಾಕಣೆ ಮಾಡುತ್ತಿದ್ದು, ಅವುಗಳಿಗೂ ಪ್ರತ್ಯೇಕ ಶೆಡ್‌ಗಳನ್ನು ನಿರ್ಮಿಸಿದ್ದಾರೆ.
ವರ್ಷಕ್ಕೆ ನಾಲ್ಕೈದು ಬಾರಿ ತೆಂಗಿನಕಾಯಿ ಕೊಯ್ಲು ಮಾಡುತ್ತಾರೆ. ಸುಮಾರು 25 ಸಾವಿರ ಕಾಯಿ ಸಿಗುತ್ತಿದ್ದು, ಅದರಲ್ಲಿ ಹೆಚ್ಚಾಗಿ ಕೊಬ್ಬರಿ ಮಾಡಿ ರಾಮನಗರ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಾರೆ. ಇತ್ತೀಚೆಗೆ ಕಾಯಿ ಮತ್ತು ಕೊಬ್ಬರಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ವ್ಯಾಪಾರಸ್ಥರು ಮನೆ ಬಳಿ ಬಂದೇ ಕೊಬ್ಬರಿ, ಕಾಯಿ ಖರೀದಿಸುತ್ತಾರೆ ಎನ್ನುತ್ತಾರೆ ನಂಜುಂಡಯ್ಯ.
ನಂಜುಂಡಯ್ಯ ತಾವೇ ಸ್ವತಃ ತೆಂಗಿನಗರಿ, ಹಸಿರೆಲೆ, ಸಗಣಿ, ಒಣಗಿದ ಅನುಪಯುಕ್ತ ಎಲೆಗಳಲ್ಲಿ ಜೀವಾಮೃತ ತಯಾರಿಸಿ ಬೆಳೆಗಳಿಗೆ ಬಳಸುತ್ತಾರೆ. ಸಾವಯವ ಗೊಬ್ಬರ ತಯಾರಿಕೆಗೆ ತೊಟ್ಟಿ ನಿರ್ಮಿಸಿದ್ದು, ಹೆಚ್ಚಿನ ರೀತಿಯಲ್ಲಿ ಸಾವಯವ ಗೊಬ್ಬರ ಮಾಡಲು ನೂತನ ಘಟಕ ತಯಾರಿ ಕೂಡ ಮಾಡಿಕೊಂಡಿದ್ದಾರೆ.
ಸರ್ಕಾರಿ ನೌಕರಿಯಲ್ಲಿದ್ದಾಗ ಕೃಷಿಗೆ ಹೆಚ್ಚಿನ ಒತ್ತು ನೀಡಲು ಆಗಿರಲಿಲ್ಲ. ನಿವೃತ್ತಿ ಬಳಿಕ ಕಳೆದ 13 ವರ್ಷದಿಂದ ಕೃಷಿಯಲ್ಲಿ ತೊಡಗಿದ್ದೇನೆ. ಎಂದಿಗೂ ಕೃಷಿಯಲ್ಲಿ ಲಾಭ, ನಷ್ಟ ಲೆಕ್ಕ ಹಾಕಿದವನಲ್ಲ. ಕೃಷಿ ಜತೆಗೆ ಮೇಕೆ, ನಾಟಿ ಕೋಳಿ ಸಾಕಣೆ ನನ್ನ ಕೈಹಿಡಿದಿದೆ. ರಾಸಾಯನಿಕ ಗೊಬ್ಬರದ ಕಡೆ ಮುಖ ಮಾಡದೇ ಕೊಟ್ಟಿಗೆ ಗೊಬ್ಬರದೊಂದಿಗೆ ಸಾವಯವ ಗೊಬ್ಬರ ತಯಾರಿಸಿಕೊಂಡಿರುವ ಕಾರಣ ಗೊಬ್ಬರ ಖರ್ಚು ಇರುವುದಿಲ್ಲ. ಕೃಷಿ ನನ್ನ ನಿವೃತ್ತಿ ಜೀವನ ಸುಖಕರವಾಗಿ ಕಟ್ಟಿಕೊಟ್ಟಿದೆ. > ನಂಜುಂಡಯ್ಯ, ರೈತ, ಜಾಲಮಂಗಲ