ಬೆಂಗಳೂರು: ಮೈಸೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಸಂಜೆ 6.30ರ ನಂತರ ವಿವಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯರ ಓಡಾಟ ನಿಷೇಧಿಸಿ ಮೈಸೂರು ವಿಶ್ವವಿದ್ಯಾಲಯ ಹೊರಡಿಸಿದ್ದ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಬೆಂಗಳೂರಿನಲ್ಲಿ ಶನಿವಾರ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ಈಗಾಗಲೇ ಆ ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಕುಲಪತಿ ಪ್ರೊ.ಹೇಮಂತ ಕುಮಾರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದರು.
ಸಾಮಾನ್ಯವಾಗಿ ವಿವಿ ಕ್ಯಾಂಪಸ್ ವಿಶಾಲವಾಗಿರುತ್ತೆ ಎಂಬುದೇನೋ ನಿಜ. ಹಾಗಂತ ವಿದ್ಯಾರ್ಥಿನಿಯರು ಓಡಾದಂತೆ ನಿರ್ಬಂಧ ಹೇರುವುದು ಸರಿಯಲ್ಲ. ಅದರ ಬದಲಿಗೆ ರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತ ವಿವಿ ಕ್ಯಾಂಪಸ್ ರೂಪಿಸಬೇಕು ಎಂದು ಎಲ್ಲ ವಿವಿ ಕುಲಪತಿಗಳಿಗೂ ಸಚಿವರು ಸೂಚನೆ ನೀಡಿದರು. ಎಲ್ಲ ದಿಕ್ಕಿನಲ್ಲೂ ತೀವ್ರ ನಿಗಾ ಇರಿಸುವ ಜತೆಗೆ, ಭದ್ರತಾ ಸಿಬ್ಬಂದಿಯಿಂದ ಪೆಟ್ರೋಲಿಂಗ್ ಮಾಡಬೇಕು. ಅಗತ್ಯ ಕಡೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದರು.
ಅತ್ಯಾಚಾರ ಘಟನೆ ಖಂಡನೀಯ. ಈ ಘಟನೆ ನಡೆಯಿತು ಎನ್ನುವ ಕಾರಣಕ್ಕೆ ಹೆಣ್ಣುಮಕ್ಕಳ ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಬೇಡ. ಅವರ ಸ್ವಾತಂತ್ರ್ಯಕ್ಕೆ ಚ್ಯುತಿಯಾಗದಂತೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು. ವಿವಿ ಕ್ಯಾಂಪಸ್ಗಳಲ್ಲಿ ಹೆಚ್ಚು ನಿಗಾವಹಿಸುವ ಕೆಲಸ ಆಗಬೇಕು. ಈಗಾಗಲೇ ಆ ಬಗ್ಗೆ ಸರ್ಕಾರ ಕ್ರಮ ವಹಿಸಿದೆ. ತಂತ್ರಜ್ಞಾನ ಬಳಸಿಕೊಂಡು ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.