ಜಿಲ್ಲೆ

ಪ್ರತಿಧ್ವನಿಸಿದ ಎಲ್​ ಆ್ಯಂಡ್​ ಟಿ ಸಮಸ್ಯೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರ ಪಾಲಿಕೆ ಸದಸ್ಯರ ಕುಂದು-ಕೊರತೆ ಆಲಿಸುವ ನಿಟ್ಟಿನಲ್ಲಿ ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್​ ರಾಮಪ್ಪ ಬಡಿಗೇರ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲೂ ನೀರಿನ ಸಮಸ್ಯೆಗಳೇ ಪ್ರತಿಧ್ವನಿಸಿದ್ದು ವಿಶೇಷವಾಗಿತ್ತು.
ನೀರು ಸರಬರಾಜು ವ್ಯವಸ್ಥೆಯನ್ನು ಎಲ್​ ಆ್ಯಂಡ್​ ಟಿಗೆ ವಹಿಸಿದ ಬಳಿಕ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಸರಿಯಾದ ಸಮಯಕ್ಕೆ ದುರಸ್ತಿ ಕಾರ್ಯ ನಡೆಸುವುದಿಲ್ಲ.. ದೂರುಗಳಿಗೆ ಸ್ಪಂದನೆ ಇಲ್ಲ..ಹೀಗೆ ಹತ್ತು ಹಲವು ಸಮಸ್ಯೆಗಳಿದ್ದರೂ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯರು ದೂರಿದರು.
ಮೇಯರ್​ ರಾಮಪ್ಪ ಬಡಿಗೇರ ಮಾತನಾಡಿ, ವಾರ್ಡ್​ಗಳಲ್ಲಿನ ಕುಂದು-ಕೊರತೆ ಗಮನಿಸಿ ಪರಿಹರಿಸಲು ಕ್ರಮ ವಹಿಸಲಾಗುವುದು. ಪೈಪ್​ಲೈನ್​ಗೆ ಅಗೆದ ರಸ್ತೆ ಸರಿಪಡಿಸಿದ್ದನ್ನು ಅಧಿಕಾರಿಗಳು ಪರಿಶೀಲಿಸಿದ ಬಳಿಕವೇ ಹಣ ಪಾವತಿ ಮಾಡಬೇಕು. ಅಗೆದ ರಸ್ತೆಗಳಿಗೆ ಮೊದಲು ಸರಿಯಾಗಿ ಮಣ್ಣಿನಿಂದ ಮುಚ್ಚಬೇಕು. ಕೆಲ ತಿಂಗಳ ನಂತರ ಡಾಂಬರೀಕರಣ ಅಥವಾ ಕಾಂಕ್ರೀಟ್​ ಮಾಡಬೇಕು. ಇದರಿಂದ ರಸ್ತೆ ಕುಸಿತ ತಪ್ಪಿಸಬಹುದು. ಈ ನಿಯಮವನ್ನು ಅಧಿಕಾರಿಗಳು ಪಾಲಿಸಬೇಕು ಎಂದು ಸೂಚಿಸಿದರು.
ಸದಸ್ಯ ವಿಜಯಾನಂದ ಶೆಟ್ಟಿ ಮಾತನಾಡಿ, ಚೈತನ್ಯ ನಗರದಲ್ಲಿ ಸಾರ್ವಜನಿಕ ಟ್ಯಾಂಕ್​ ಸ್ವಚ್ಛಗೊಳಿಸಲು ಹೇಳಿ 3-4 ತಿಂಗಳಾದರೂ ಮಾಡಿಲ್ಲ. ವಾರ್ಡ್​ನಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, ಅದಕ್ಕೂ ಪೂರ್ವ ಪೈಪ್​ಲೈನ್​ ಅಳವಡಿಕೆ ಮಾಡುವಂತೆ ಸೂಚಿಸಲಾಗಿದೆ. ಆದಾಗ್ಯೂ ಅಧಿಕಾರಿಗಳು ಕಾಮಗಾರಿ ಆರಂಭಿಸಿಲ್ಲ. ರಸ್ತೆ ಮಾಡಿದ ಮೇಲೆ ಲೈನ್​ ಅಳವಡಿಕೆ ಮಾಡಲು ಆರಂಭಿಸುತ್ತಾರೆ ಎಂದು ದೂರಿದರು.
ಮಯೂರ ಮೋರೆ ಮಾತನಾಡಿ, ಹೊಸ ನಳದ ಸಂಪರ್ಕಕ್ಕೆ 5-6 ಮೀ. ಮಾತ್ರ ಪೈಪ್​ಲೈನ್​ ಮಾಡುತ್ತೇವೆ. ಉಳಿದಿದ್ದನ್ನು ಜನರೇ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಅಪಾರ್ಟ್​ಮೆಂಟ್​ಗಳಲ್ಲಿ ಪ್ರತಿ ಮನೆಗಳಿಗೆ ಪ್ರತ್ಯೇಕ ಸಂಪರ್ಕ ನೀಡಬೇಕು ಎಂದರು. ಇದಕ್ಕೆ ಧನಿಗೂಡಿಸಿದ ಕವಿತಾ ಕಬ್ಬೇರ, 2020-2021ನೇ ಸಾಲಿನ ನಂತರ ನಿರ್ಮಾಣವಾದ ಮನೆಗಳಿಗೆ ಪೈಪ್​ಲೈನ್​ ಅಳವಡಿಸಲು ಎಲ್​ ಆ್ಯಂಡ್​ ಟಿ ತಕರಾರು ಮಾಡುತ್ತಿದೆ.
ಸದಸ್ಯ ಶಿವು ಹಿರೇಮಠ ಮಾತನಾಡಿ, ಪೈಪ್​ಲೈನ್​ ಅಳವಡಿಕೆ ನಂತರ ರಸ್ತೆ ದುರಸ್ತಿ ಯಾವ ರೀತಿ ಇರಬೇಕು ಎಂಬುದನ್ನು ಮೊದಲು ಅಧಿಕಾರಿಗಳು ತಿಳಿಯಲಿ. ಯಾವ ಸ್ಥಳದಲ್ಲೂ ರಸ್ತೆ ದುರಸ್ತಿ ಕಾರ್ಯ ಸರಿಯಾಗಿಲ್ಲ. ಒಂದು ಬಿಲ್​ ಸಮಸ್ಯೆ ಪರಿಹರಿಸಲು 6-7 ತಿಂಗಳಾಗುತ್ತಿದೆ. ಈ ಸಭೆಯಲ್ಲಿ ಚಚಿರ್ತವಾದ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವಾಗಬೇಕೆ ಹೊರತು, ಕಾಟಾಚಾರದ ಸಭೆ ಆಗಬಾರದು ಎಂದರು. ಇದಕ್ಕೆ ವಿಪಕ್ಷ ನಾಯಕ ರಾಜಶೇಖರ ಕಮತಿ ಸಹ ಸಮ್ಮತಿಸಿದರು.
ಉಳಿದಂತೆ ಬಡಾವಣೆಗಳಲ್ಲಿನ ಕಸ ವಿಲೇವಾರಿ, ಸ್ವಚ್ಛತೆ, ಅಗತ್ಯಕ್ಕೆ ತಕ್ಕಂತೆ ಟಿಪ್ಪರ್​ ವಿತರಣೆ, ಪೌರ ಕಾಮಿರ್ಕರ ನೇಮಕ ಸೇರಿ ವಿವಿಧ ವಿಷಯಗಳು ಕುರಿತು ಸದಸ್ಯರಾದ ಶಂಭುಗೌಡ ಸಾಲಮನಿ, ರತ್ನಾಬಾಯಿ ನಾಝರೆ, ಇತರರು ಗಮನ ಸೆಳೆದರು.
ಸಹಾಯಕ ಆಯುಕ್ತ ಇ. ತಿಮ್ಮಪ್ಪ, ಉಮ ಮೇಯರ್​ ದುರ್ಗಮ್ಮ ಬಿಜವಾಡ, ಸದಸ್ಯರು, ಅಧಿಕಾರಿಗಳು, ಇತರರು ಇದ್ದರು.