ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದಲ್ಲಿನ ಮದ್ಯದಂಗಡಿ ಮುಚ್ಚಿಸುವಂತೆ ಒತ್ತಾಯಿಸಿ ಮಹಿಳೆಯೊಬ್ಬರು ಸಚಿವ ಶರಣ ಪ್ರಕಾಶ ಪಾಟೀಲ್ ಬಳಿ ಮನವಿ ಮಾಡಿದರು.  
ಜಿಲ್ಲೆ

ಮದ್ಯದಂಗಡಿ ಮುಚ್ಚಿಸಲು ಸಚಿವರಿಗೆ ಮನವಿ

ಚಿಕ್ಕಮಗಳೂರು: ಆಟಆಡುವ ಮಕ್ಕಳೆಲ್ಲ ಬಾರ್‌ಗೆ ಹೋಗುತ್ತಿದ್ದಾರೆ ಸರ್. ನಮ್ಮೂರಿನಲ್ಲಿ ಕದ್ದುಮುಚ್ಚಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಆಡುವ ವಯಸ್ಸಿನಲ್ಲೇ ಕುಡಿದು ಸಾಯುತ್ತಿದ್ದಾರೆ ಸರ್' ಎಂದು ಗ್ರಾಮದಲ್ಲಿ ಬಾರ್‌ನಿಂದಾಗುತ್ತಿರುವ ಅನಾಹುತವನ್ನು ಮಹಿಳೆಯೊಬ್ಬರು ವೈದ್ಯಕೀಯ ಸಚಿವ ಶರಣ್ ಪ್ರಕಾಶ್ ಪಾಟೀಲ್‌ರ ಮುಂದೆ ಬಿಚ್ಚಿಟ್ಟರು.

ವೈದ್ಯಕೀಯ ಸಚಿವರು ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸಚಿವರ ಕಾರಿನ ಮುಂದೆ ನಿಂತು ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಕೈಮುಗಿದ ಮಹಿಳೆ ಬೇಡಿಕೊಂಡರು. ಮರ್ಲೆ ಗ್ರಾಮದಲ್ಲಿ ತಲೆಎತ್ತಿರುವ ವೈನ್ ಶಾಪ್‌ನಿಂದಾಗಿ ಗ್ರಾಮದ ಅಪ್ರಾಪ್ತ ಯುವಕರು ಸಹ ಕುಡಿಯಲು ಆರಂಭಿಸಿದ್ದಾರೆ ಎಂದು ದೂರಿದರು.
ಈ ಹಿಂದೆ ಶಾಸಕ ಎಚ್.ಡಿ. ತಮ್ಮಯ್ಯ ಎದುರು ಅಳಲು ತೋಡಿಕೊಂಡಿದ್ದ ಮಹಿಳೆ ಡಿಸಿ ಕಚೇರಿ ಮುಂದೆಯೂ ವೈನ್ ಶಾಪ್ ಮುಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಅದನ್ನು ನಿಲ್ಲಿಸಲು ಪಟ್ಟು ಬಿಡದ ಮಹಿಳೆ ಇದೀಗ ಸಚಿವ ಶರಣ್ ಪ್ರಕಾಶ್ ಪಾಟೀಲ್ ಬಳಿಯೂ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ.