ಹುಬ್ಬಳ್ಳಿ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಮನೋವೈಜ್ಞಾನಿಕ ದೃಷ್ಟಿಕೋನದಿಂದ ವಿಜ್ಞಾನ ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿ ಸ್ನೇಹಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಅಖಿಲ ಕರ್ನಾಟಕ ಪ್ರೌಢಶಾಲಾ ವಿಜ್ಞಾನ ಶಿಕ್ಷಕರ ವೇದಿಕೆ ವತಿಯಿಂದ ಧಾರವಾಡದಲ್ಲಿ ಮಂಗಳವಾರದಂದು ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಎಸ್ಎಸ್ಎಲ್ಸಿ ವಿಜ್ಞಾನ ಪ್ರಶ್ನೆಪತ್ರಿಕೆ ಅತ್ಯಂತ ಕ್ಲಿಷ್ಟಕರ ಮತ್ತು ಗೊಂದಲಮಯವಾಗಿರದಂತೆ, ಗ್ರಾಮೀಣ ಹಾಗೂ ನಗರದ ವಿದ್ಯಾರ್ಥಿಗಳು ಈ ಪ್ರಶ್ನೆಪತ್ರಿಕೆಯನ್ನು ಬಿಡಿಸಲು ಸರಳವಾಗಿರುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ವೇದಿಕೆಯ ರಾಜ್ಯ ಅಧ್ಯಕ್ಷ ಶ್ರೀಧರ ಪಾಟೀಲಕುಲಕರ್ಣಿ ನೇತೃತ್ವದಲ್ಲಿ ಸಚಿವರನ್ನು ಭೇಟಿಯಾದ ಶಿಕ್ಷಕರು, ರಾಜ್ಯ ಮಟ್ಟದಲ್ಲಿ ವಿಜ್ಞಾನ ವಿಷಯದಲ್ಲಿ 100 ಕ್ಕೆ 100 ಅಂಕ ಗಳಿಸಲು ವಿದ್ಯಾರ್ಥಿಗಳು ಭಾಷಾ ವಿಷಯಗಳಿಗಿಂತಲೂ ಹಿಂದೆ ಬಿದ್ದಿದ್ದು ವಿಪರ್ಯುಸದ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಜ್ಞಾನ ಕ್ಷೇತ್ರವನ್ನು ಆಯ್ಕೆ ಮಾಡಬೇಕೋ ಅಥವಾ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಮಕ್ಕಳು ತೊಡಗಿರುವುದು ಚಿಂತೆಗೀಡು ಮಾಡಿದೆ. ಕೇವಲ ಔದೊ್ಯೕಗಿಕ ಪ್ರವೇಶ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡಾಗ 10ನೇ ತರಗತಿಯಲ್ಲೇ ಅನುತಿ್ತೕರ್ಣರಾದ ವಿದ್ಯಾರ್ಥಿಗಳ ಶಿಕ್ಷಣ ಕುಂಠಿತವಾಗುವುದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿದರು.
ಎಸ್ಎಸ್ಎಲ್ಸಿ ಫಲಿತಾಂಶದ ಹಂತದಲ್ಲಿ ಪ್ರಯೋಗ ಮಾಡುವುದರ ಬದಲು, ಪೂರ್ವ ಸಿದ್ಧತೆಯಾಗಿ 6 ರಿಂದ 8ನೇ ತರಗತಿಗಳಿಂದ ಇಂತಹ ಉನ್ನತ ಉದ್ದೇಶದ ಹಂತಗಳನ್ನು ಅಳವಡಿಸುವುದು ಸೂಕ್ತ. ಗ್ರಾಮೀಣ ಮಕ್ಕಳ ಮನೋವೈಜ್ಞಾನಿಕ, ಸಾಮಾಜಿಕ, ಕುಟುಂಬದ ಶೈಕ್ಷಣಿಕ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ಮುಂಬರುವ ದಿನಗಳಲ್ಲಿ ವಿಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ರಾಜ್ಯದ ಮಕ್ಕಳಲ್ಲಿ ಧೈರ್ಯ ತುಂಬುವ ಮತ್ತು ರಾಜ್ಯಾದ್ಯಂತ ವಿಜ್ಞಾನ ಬೋಧಕರ ನೈತಿಕತೆ ಕುಸಿಯದಂತೆ ತಡೆಯಬೇಕು ಎಂದು ಆಗ್ರಹಿಸಿದರು.
ವಿ.ಎಸ್.ಹುದ್ದಾರ, ಡಿ.ಬಿ.ದೊಡ್ಡಮನಿ, ಪ್ರತಿಭಾ ಹೂಗಾರ, ಸಂಜೀವಕುಮಾರ ಭೂಶೆಟ್ಟಿ. ಪ್ರಮೋದ ವಾದಿರಾಜ, ವನಮಾಲಾ ಹೆಗಡೆ, ರೇಣುಕಾ ಮಂಟೂರ, ಸೋಮನಾಥ ಸ್ವಾಮಿ, ಪ್ರಕಾಶ ಭೂತಲ, ದೀಪಾ ನಾಯಕ, ಲಿಯಾಖತ ಅಲಿ ಪೀರಜಾದೆ ಹಾಗೂ ಇತರ ಶಿಕ್ಷಕರು ಹಾಜರಿದ್ದರು.