ಜಿಲ್ಲೆ

ದೊಡ್ಡಮುಳ್ಳಿ ಗಜನಿಗೆ ಬಂಡು ನಿರ್ಮಿಸಲು ಮನವಿ

ವೀರೇಶ ಸೌದ್ರಿ

ಕುಮಟಾ: ತಾಲೂಕಿನ ಕಪ್ಪೆಕುರ್ವೆ ಗ್ರಾಮದ ದೊಡ್ಡಮುಳ್ಳಿ ಗಜನಿಗೆ ಸುಭದ್ರ ಕಟ್ಟು(ಬಂಡು) ನಿರ್ಮಿಸಬೇಕು ಎಂದು ರೈತರು ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇಲ್ಲಿನ ಗಜನಿಯ ರೈತರು ಕಾಗಾಲ ಗ್ರಾಮದವರಾಗಿದ್ದು, ಸಾಗುವಳಿ ಜಮೀನಿರುವ ದೊಡ್ಡಮುಳ್ಳಿ ಗಜನಿಯು ಕಪ್ಪೆಕುರ್ವೆ ಗ್ರಾಮದಲ್ಲಿದೆ. ದೋಣಿಯ ಮೂಲಕ ತೆರಳಿ ಬೇಸಾಯ ಮಾಡಬೇಕಾಗುತ್ತದೆ. ಸುಮಾರು 50 ಎಕರೆಗಿಂತ ಹೆಚ್ಚಿರುವ ದೊಡ್ಡಮುಳ್ಳಿ ಗಜನಿಯ ಪೂರ್ವ ಮತ್ತು ಪಶ್ಚಿಮದ ಅಂಚಿನಲ್ಲಿ ಅಘನಾಶಿನಿ ನದಿ ಇದೆ. ಈಗ ಬಂಡು ತೀರಾ ದುರ್ಬಲವಾಗಿದೆ. ಮುಖ್ಯವಾಗಿ ಮಳೆಗಾಲದಲ್ಲಿ ಕ್ಷೇತ್ರಕ್ಕೆ ತೆರಳು ಕಷ್ಟವಾಗುತ್ತದೆ. ಆದ್ದರಿಂದ ಗಜನಿಯ ಬಂಡಿಗೆ ಶಿಲೆಕಲ್ಲಿನ ತಡೆಗೋಡೆ ನಿರ್ಮಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ರೈತರು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಶಾಸಕರು, ಸಂಬಂಧಿಸಿದ ಅಧಿಕಾರಿಗೆ ದೂರವಾಣಿ ಕರೆ ಮಾಡಿ ರೈತರ ಸಮಸ್ಯೆ ವಿವರಿಸಿದರು. ದೊಡ್ಡಮುಳ್ಳಿ ಗಜನಿಯ ಅರ್ಧ ಕಿಲೋ ಮೀಟರ್ ಉದ್ದದ ಬಂಡಿಗೆ ಕಲ್ಲಿನ ಪಿಚಿಂಗ್ ಮಾಡಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ರೈತರಾದ ಜಿ.ಕೆ. ಪಟಗಾರ, ಹವಾಲ್ದಾರ ವಿಷ್ಣುಗಾವಡಿ, ಪುರ್ಸು ಹರಿಕಾಂತ, ದೇವಿದಾಸ ಹರಿಕಾಂತ, ರಾಘವೇಂದ್ರ ಪಟಗಾರ, ಜಗನಾಥ ಹರಿಕಾಂತ, ಜಗ್ಗು ಹರಿಕಾಂತ, ಸುಬ್ರಾಯ ಪಟಗಾರ, ಗಣೇಶ ಪಟಗಾರ, ಮಂಜುನಾಥ ಗಾವಡಿ, ಶಿವಯ್ಯ ಹಿಣಿ, ಜಟ್ಟಿ ಹರಿಕಾಂತ, ನಾರಾಯಣ ಹಿಣಿ, ಜಗನಾಥ ಹರಿಕಾಂತ, ಲಂಗಡ್ಯಾ ಬಿಕ್ಕುಮನೆ ಇತರರು ಇದ್ದರು.