ತಡಸ: ಗ್ರಾಮದ ಅಂಬೇಡ್ಕರ್‌ನಗರದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಕಾಂಪೌಂಡ್ ನಿರ್ಮಿಸಬೇಕು ಹಾಗೂ ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ರಸ್ತೆ ಉಬ್ಬು ನಿರ್ಮಿಸಬೇಕು ಎಂದು ಕರವೇ ಗ್ರಾಮ ಘಟಕ ವತಿಯಿಂದ ಎಎಸ್‌ಐ ಕಾಸಿಂಸಾಬ್ ಸಂಶಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಶಿರಸಿ-ಹುಬ್ಬಳ್ಳಿ ರಸ್ತೆ ಬಳಿಯ ಅಂಗನವಾಡಿ ಕೇಂದ್ರಕ್ಕೆ ನಿತ್ಯ ಸುಮಾರು 30 ವಿದ್ಯಾರ್ಥಿಗಳು ಬರುತ್ತಾರೆ. ದಿನಾಲೂ ರಸ್ತೆ ದಾಟುವಾಗ ಮಕ್ಕಳು ಹಾಗೂ ಪಾಲಕರು ಕಷ್ಟಪಡುತ್ತಿದ್ದಾರೆ. ಅಲ್ಲದೆ ಮಕ್ಕಳು ರಸ್ತೆಗೆ ಹೊಂದಿಕೊಂಡಿರುವ ಜಾಗದಲ್ಲೇ ಆಟವಾಡುತ್ತಾರೆ. ಮಕ್ಕಳ ಹಿತ ಹಾಗೂ ಸುರಕ್ಷತೆ ದೃಷ್ಟಿಯಿಂದ ಕೇಂದ್ರದ ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕು. ಹಾಗೂ ಕೇಂದ್ರ ಬಳಿ ರಸ್ತೆ ಉಬ್ಬು ನಿರ್ಮಿಸಿ ಮಕ್ಕಳಿಗೆ ಹಾಗೂ ಪಾಲಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಗ್ರಾಮ ಘಟಕ ಅಧ್ಯಕ್ಷ ಗಂಗಾಧರ ಬಂಡಲ್ಗಟ್ಟಿ, ಜಮಾದಾರ್ ಖಾದ್ರಿ ಅಂಚಿನಾಳ, ಮಲ್ಲಿಕಾರ್ಜುನಗೌಡ ಪಾಟೀಲ, ಪರಶುರಾಮ ಭಜಂತ್ರಿ, ಅನ್ವರಸಾಬ್ ಕೊಲ್ಲಾಪುರ ಇತರರು ಇದ್ದರು.