ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಗುರುವಾಯನಕೆರೆ ಎಕ್ಸೆಲ್ ಕಾಲೇಜು ಗುಣಮಟ್ಟದ ಶಿಕ್ಷಣದ ಜತೆ ಸಂಸ್ಕಾರಯುತ ಶಿಕ್ಷಣ ನೀಡುವುದರಿಂದ, ರಾಜ್ಯದ ಪಾಲಕರು ಎಕ್ಸೆಲ್ ಕಾಲೇಜನ್ನು ಪ್ರೀತಿಸುತ್ತಿದ್ದಾರೆ. ಇಂದು ಶಿಕ್ಷಣ ಕ್ರಾಂತಿಯಲ್ಲಿ ಎಕ್ಸೆಲ್ ಕಾಲೇಜು ರಾಜ್ಯಮಟ್ಟದಲ್ಲಿ ಬೆಳೆದಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಾರತಭೂಷಣ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾರ್ಯವರ್ಯ ಶ್ರೀ ಹೇಳಿದರು.
ಗುರುವಾಯನಕೆರೆ ಕುವೆಟ್ಟು ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ನಲ್ಲಿ ಎಕ್ಸೆಲ್ ವಿದ್ಯಾರ್ಥಿಗಳ ಪಾಲಕರಾದ 301 ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾನುವಾರ ಆಶೀರ್ವಚನ ನೀಡಿ ವಿದ್ಯಾರ್ಥಿಗಳು ಸಾಧಕರು, ವಿದ್ವಾಂಸರ ಸಾಧನೆಗಳನ್ನು ಅರಿತುಕೊಳ್ಳುವ ಮನೋಭಾವ ಬೆಳೆಸಬೇಕು. ಆಗ ದೇಶದ ಉತ್ತಮ ಪ್ರಜೆಗಳಾಗಳು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರ ಹಕ್ಕು. ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ನಾನು ಎಂಬ ಅಹಂ ಇಡದೆ ಶಿಕ್ಷಣವೇ ನನ್ನ ಗುರಿ ಎಂದು ಭಾವಿಸಬೇಕು. ಪಾಲಕರು ಕೂಡ ಮಕ್ಕಳಿಗೆ ತಮ್ಮ ಶ್ರಮ, ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ಮಕ್ಕಳೊಂದಿಗೆ ಪ್ರೀತಿಯ ಭಾವನೆ ಇಡಬೇಕು ಎಂದರು.
ದೆಹಲಿ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ರಮೇಶ್ ಸಾಲಿಯಾನ್ ದಿಕ್ಸೂಚಿ ಭಾಷಣ ಮಾಡಿದರು. ಗುರುವಾಯನಕೆರೆ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ದಾಖಲೆಯಾಗಿ ಎಕ್ಸೆಲ್ ವಿದ್ಯಾರ್ಥಿಗಳ ಪಾಲಕರಾದ 301 ಶಿಕ್ಷಕರಿಗೆ ಗೌರವಾರ್ಪಣೆ ನಡೆಯಿತು. ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಜಿ.ಎಸ್, ಎಕ್ಸೆಲ್ ಅರಮಲೆಬೆಟ್ಟ ಕ್ಯಾಂಪಸ್ನ ಪ್ರಭಾರ ಪ್ರಾಂಶುಪಾಲ ಡಾ.ಪ್ರಜ್ವಲ್ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ.ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಡಾ.ಪ್ರಜ್ವಲ್ ವಂದಿಸಿದರು. ಉಪನ್ಯಾಸಕರಾದ ದುರ್ಗಾ ಪರಮೇಶ್ವರ್, ಪ್ರಜ್ವಿತ್, ಪ್ರಸನ್ನ ಕುಮಾರ್, ಸಂತೋಷ್ ಕೆ.ಕೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಠಲ ನಾಯಕ್ ಕಲ್ಲಡ್ಕ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.
ದೆಹಲಿ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ರಮೇಶ್ ಸಾಲಿಯಾನ್ ದಿಕ್ಸೂಚಿ ಭಾಷಣ ಮಾಡಿ, ಗುರುವಾಯನಕೆರೆ ಎಂಬ ಪ್ರದೇಶ ಶಿಕ್ಷಣ ೇತ್ರವಾಗಿ ಬೆಳಗಲು ಎಕ್ಸೆಲ್ ಕಾಲೇಜು ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಪದವಿ, ಕಾಲೇಜು ಶಿಕ್ಷಣ ಭವಿಷ್ಯ ರೂಪಿಸುವ ತಾಣವಾಗುತ್ತದೆ. ಕಾಲೇಜಿನಲ್ಲಿ ಕಠಿಣ ಶಿಕ್ಷಣ ಸಿಗುತ್ತಿದೆ ಎಂದರೆ ಮಕ್ಕಳ ಭವಿಷ್ಯ ಸುಲಭವಾಗುತ್ತಿದೆ ಎಂದರ್ಥ. ಮಕ್ಕಳ ಶಿಕ್ಷಣದ ಸಮಯ ಅತಿಯಾದ ಅನುಕಂಪ ಬೇಡ. ಕಲಿಯುವ ಸಮಯ ಕಲಿಯಲಿ. ಮತ್ತೆ ಅವರ ಬದುಕು ನೆಮ್ಮದಿಯಿಂದ ಇರುತ್ತದೆ. ವಿದ್ಯಾರ್ಥಿಗಳು ಟೀಕೆಯ ಕಡೆ ಗಮನ ಹರಿಸಬೇಡಿ. ಟೀಕೆಯನ್ನು ಭವಿಷ್ಯದ ಪಾಠ ಎಂದು ತಿಳಿಯಿರಿ. ಶಿಕ್ಷಣವನ್ನು ಒತ್ತಡ ಎಂದೆನ್ನದೆ ಪ್ರೀತಿಯಿಂದ ಕಾಣಬೇಕು ಎಂದರು.