ವಿಜಯಪುರ: ಜಾತಿ, ಮತ-ಪಂಥಗಳ ಬೇಧವಿಲ್ಲದೇ ಮೇಲು-ಕೀಳೆಂಬ ಹಂಗಿಲ್ಲದೇ, ಮಹಿಳೆ-ಪುರುಷರೆಂಬ ತಾರತಮ್ಯವಿಲ್ಲದೇ ಸಮ ಸಮಾಜ ನಿರ್ಮಾಣದ ದೃಷ್ಠಿಕೋನದೊಂದಿಗೆ ಬಸವಾದಿ ಪ್ರಮಥರು ಕಟ್ಟಿದ ಅನುಭವ ಮಂಟಪದ ಪ್ರತಿರೂಪವೇ ಓದುಗರ ಚಾವಡಿ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರೀಷತ್ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಹೇಳಿದರು.
ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರಲ್ಲಿ ಓದುಗರ ಚಾವಡಿ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ‘ಸಿಂಚನ ಕೃತಿ ಬಿಡುಗಡೆ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಹಾಗೂ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ಡಾ. ಎಂ. ಎಸ್. ಮಾಗಣಗೇರಿ ಸಂಪಾದಿಸಿದ ಸಿಂಚನ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಶಿಕ್ಷಣ, ಸಾಹಿತ್ಯಕ್ಕೆ ಸಂಬಂಧಿಸಿದಂತೆ ಈ ದೇಶದಲ್ಲಿ ಎರಡು ಭವ್ಯ ಸ್ಥಳಗಳನ್ನು ಗುರುತಿಸುವುದಾದರೆ ಅದು ಒಂದು ನಳಂದಾ ವಿಶ್ವ ವಿದ್ಯಾಲಯ ಇನ್ನೊಂದು ಕಲ್ಯಾಣದ ಅನುಭವ ಮಂಟಪ. ಈ ಎರಡೂ ಕೇಂದ್ರಗಳಲ್ಲಿ ಅಸಂಖ್ಯಾತ ಜನ ಬೇಧ-ಭಾವವಿಲ್ಲದೇ ಅಧ್ಯಯನ, ವಿಚಾರ ಮಂಥನದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಆ ಎರಡೂ ಕೇಂದ್ರಗಳ ಅಳಿದು ಇತಿಹಾಸದ ಪುಟ ಸೇರಿವೆ. ಆದರೂ, ಅವುಗಳ ಹಿರಿಮೆ ಈಗಲೂ ಅವಿಸ್ಮರಣೀಯ. ಇದೀಗ ಈ ಓದುಗರ ಚಾವಡಿ ಅದನ್ನು ನೆನಪಿಸುವಂತಿದೆ ಎಂದು ಕೊಂಡಾಡಿದರು.
ಓದುವ ಸಂಸ್ಕೃತಿ ಇನ್ನೂ ಇದೆ. ಓದುಗರ ಸಂಖ್ಯೆ ಹೆಚ್ಚಾಗಿದೆ ಎಂಬುದಕ್ಕೆ ಚಾವಡಿಯ ಈ ಕಾರ್ಯಕ್ರಮವೇ ಸಾಕ್ಷಿ. ಪ್ರತಿ ವರ್ಷ ಕನಿಷ್ಠ 4000 ಪುಸ್ತಕಗಳು ಮುದ್ರಣಗೊಳ್ಳುತ್ತವೆ ಎಂಬ ಅಂಕಿ-ಅಂಶವೇ ಇಂದಿಗೂ ಓದುಗರ ಸಂಖ್ಯೆ ಇದೆ ಎಂಬುದನ್ನು ಸಾಬೀತು ಪಡಿಸುತ್ತದೆ. ಓದು ಜ್ಞಾನದ ಕ್ಷಿತಿಜ ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಓದುಗರ ಚಾವಡಿಯ ಕಾರ್ಯ ಅನುಪಮ ಎಂದರು.
ಅಭಿನವ ಪಂಪ, ನಾಗಚಂದ್ರ, ಸಂತರು, ಸೂಫಿಗಳು ಹಾಗೂ ವಚನ ಪಿತಾಮಹ ಡಾ.ಫ. ಗು. ಹಳಕಟ್ಟಿ ಹುಟ್ಟಿದಂತ ಈ ಜಿಲ್ಲೆಯಲ್ಲಿ ಪುಸ್ತಕಗಳನ್ನು ಓದುವ ಪರಂಪರೆಯನ್ನು ಹೆಚ್ಚಿಸುವ ಮಹತ್ವದ ಕಾರ್ಯ ಓದುಗರ ಚಾವಡಿ ಮಾಡುತ್ತಿರುವುದು ಹೆಮ್ಮೆಪಡುವ ಸಂಗತಿಯಾಗಿದೆ ಎಂದರು.
ಉದ್ಘಾಟನೆ ನೆರವೇರಿಸಿದ ಹಿರಿಯ ಪತ್ರಕರ್ತೆ ಕೃಷ್ಣಿ ಶಿರೂರು ಮಾತನಾಡಿ, ಶಿಕ್ಷಕರ ಜವಾಬ್ದಾರಿ ಹಿಂದಿಗಿಂತಲೂ ಈಗ ಹೆಚ್ಚಾಗಿದೆ. ಆ ಜವಾಬ್ದಾರಿ ಅರಿತು ಶಿಕ್ಷಕರು ಸೇವೆ ಸಲ್ಲಿಸಬೇಕು. ಮಕ್ಕಳಿಗೆ ಪಠ್ಯದ ಜೊತೆಗೆ ಬದುಕಿನ ಶಿಕ್ಷಣ ಕಲಿಸಬೇಕು. ಮಕ್ಕಳಲ್ಲಿ ಸವಾಲುಗಳನ್ನು ಎದುರಿಸುವ ಶಕ್ತಿ-ಸಾಮರ್ಥ್ಯ ಬೆಳೆಸಬೇಕು. ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದರಲ್ಲದೇ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ತಮ್ಮ ಯಶೋಗಾಥೆಯನ್ನು ಹೇಳುವ ಮೂಲಕ ನೊಂದ ಮನಸ್ಸುಗಳಿಗೆ ಪ್ರೇರಣೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ತಿಮ್ಮಾಪುರದ ಕಲ್ಯಾಣ ಆಶ್ರಮದ ಪೂಜ್ಯ ಮಹಾಂತ ಶ್ರೀಗಳು ಆಶೀರ್ವಚನ ನೀಡುತ್ತಾ, ಸರಳ ಬದುಕನ್ನು ಕಟ್ಟಿಕೊಂಡು ವಸುದೈವ ಕುಟುಂಬಕಂ ಎಂಬ ವಾತಾವರಣವನ್ನು ಸೃಷ್ಟಿಸಿ ಉತ್ತಮವಾದ ಸಂಸ್ಕೃತಿಯನ್ನು ಬೆಳೆಸುವ ಸಂಸ್ಕಾರವನ್ನು ಬಿತ್ತುವ ಕಾರ್ಯವನ್ನು ಓದುಗರ ಚಾವಡಿ ಮಾಡುತ್ತಿರುವುದು ಶ್ಲಾಘನೀಯ. ಭಾವೈಕ್ಯತೆಯಿಂದ ಕೂಡಿದ ಸೌಹಾರ್ಧಯುತ ವಾತಾವರಣವನ್ನು ನೋಡಿದಾಗ 12ನೇ ಶತಮಾನದ ಶರಣರ ಅನುಭವ ಮಂಟಪ ನೆನಪಾಗುತ್ತದೆ. ಸಮಾನ ಮನಸ್ಕರು ಸೇರಿ ಸಾಹಿತ್ಯ, ಸಂಸ್ಕೃತಿ ಬೆಳೆಸಿ ಜಾತಿ, ಮತ, ಭೇದ ಮರೆತು ಎಲ್ಲರನ್ನೂ ಮುಖ್ಯ ವಾಹಿನಿಗೆ ತರುವ ಕಾರ್ಯ ಶ್ಲಾಘನೀಯ ಎಂದರಲ್ಲದೇ ಅತ್ಯಂತ ಮಾರ್ಮಿಕವಾಗಿ ತತ್ವಜ್ಞಾನವನ್ನು ಬೋಧಿಸಿದರು.
ಪತ್ರಕರ್ತ ಪರಶುರಾಮ ಭಾಸಗಿ ಕೃತಿ ಪರಿಚಯಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಉಪಯುಭಾಗದ ವಿಸ್ತರಣಾಧಿಕಾರಿ ಸಿಕಂದರಭಕ್ತ ಅಲ್ಲಿಸಾಬ್ ಜಮಾದಾರ್ ಹಾಗೂ ಡಾ. ಪ್ರಭುಗೌಡ ಪಾಟೀಲ (ಚಬನೂರ) ಮಾತನಾಡಿದರು.
ಚಾವಡಿಯ ಅಧ್ಯಕ್ಷ ಶರಣು ಸಬರದ ಚಾವಡಿಯ ಚಟುವಟಿಕೆಗಳ ಕುರಿತು ವಿವರಿಸಿದರು. ಗೌರವಾಧ್ಯಕ್ಷ ಬಿ.ಆರ್. ಬನಸೋಡೆ, ಭಾರತ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಸಕ್ರಿ, ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಡಾ. ಈ.ಡಿ. ಕೊಟ್ನಾಳ, ಡಾ.ಜಿ. ಶ್ರೀನಿವಾಸಲು, ಶಶಿಕಲಾ ನಾಯ್ಕೋಡಿ, ಚಂದ್ರಶೇಖರ ಬುರಾಣಪುರ, ಹಾಜಿ ಮಸ್ತಾನ್ ಗೌಂಡಿ, ಮಹದೇವ ಕುರೆ, ಫಯಾಜ್ ಕಲಾದಗಿ, ಶಿಕ್ಷಕ ಮಹಮ್ಮದ್ ಇಕ್ಬಾಲ್ ಅವಟಿ, ಡಾ. ಎಂ.ಎಸ್. ಮಾಗಣಗೇರಿ ಮತ್ತಿತರರಿದ್ದರು. ಜಿಲ್ಲಾ ಮಟ್ಟದ ಸಾಧಕ ಪ್ರಶಸ್ತಿಗೆ ಆಯ್ಕೆಯಾದ 20 ಸಾಧಕರನ್ನು ಹಾಗೂ 50 ಜನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊ.ಯು.ಎನ್. ಕುಂಟೋಜಿ, ಡಾ. ರಾಜಕುಮಾರ ಜೊಲ್ಲೆ, ರಾಜಶೇಖರ ಉಮರಾಣಿ, ಮನು ಪತ್ತಾರ, ಬಸವರಾಜ ಕುಂಬಾರ ಕಾರ್ಯಕ್ರಮ ನಿರ್ವಹಿಸಿದರು.