ಜಿಲ್ಲೆ

ಇಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ

Mangaluru - Shravan Kumar Nala

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಉತ್ತಮ ಮಳೆಯಾಗಿದ್ದು, ಮತ್ತೆರಡು ದಿನಗಳ ಕಾಲ ಮಳೆ ಮತ್ತಷ್ಟು ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಜು.18 ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ದ.ಕ.ಜಿಲ್ಲೆಯಲ್ಲಿ ಬುಧವಾರ ಮುಂಜಾನೆಯಿಂದಲೇ ಮಳೆ ಚುರುಕುಗೊಂಡು ನಂತರ ದಿನ ಆಗಾಗ ಮಳೆ ಸುರಿಯುತ್ತಲೇ ಇತ್ತು. ಪೂರ್ಣ ಪ್ರಮಾಣದ ಮೋಡಕವಿದ ವಾತಾವರಣ ಸಂಜೆ ಕಂಡುಬಂದಿತ್ತು. ಮಳೆಯಿಂದ ಜಿಲ್ಲೆಯಲ್ಲಿ ನದಿ, ಕೊಳ್ಳಗಳು ತುಂಬಿ ಹರಿಯುತ್ತಿವೆ. ದಿನಪೂರ್ತಿ ನಿರಂತರ ಮಳೆಯಾಗಿದ್ದು, ಚಳಿ ಹಿಡಿಸಿದೆ. ಬುಧವಾರ ನಗರದ ನಾನಾ ಕಡೆಯಲ್ಲಿ ಸಂಜೆಯ ಬಳಿಕ ಮಳೆ ತೀವ್ರವಾಗಿದ್ದು, ಉಜ್ಜೋಡಿ, ಪಂಪ್ ವೆಲ್, ಪಡೀಲ್ , ಬಜಾಲ್ ಸೇರಿದಂತೆ ನಾನಾ ಕಡೆಯಲ್ಲಿ ರಸ್ತೆಯಲ್ಲಿ ಮಳೆಯ ನೀರು ಹರಿದು ಸಂಚಾರಕ್ಕೆ ಬಹಳಷ್ಟು ಸಮಸ್ಯೆಯನ್ನು ತಂದು ಹಾಕಿದೆ. ಉಳಿದಂತೆ ನಗರ ಭಾಗದಲ್ಲಿ ಸಂಜೆಯ ಬಳಿಕ ಮಳೆ ವೇಗ ಪಡೆದುಕೊಂಡರೆ ಗ್ರಾಮಾಂತರ ಭಾಗದಲ್ಲಿ ಮಳೆ ಬೆಳಗ್ಗೆಯಿಂದಲೇ ಸುರಿಯಲಾರಂಭಿಸಿದೆ.

*ಜುಲೈ 25ರ ವರೆಗೂ ಮಳೆಯ ಮುನ್ಸೂಚನೆ

ಬಂಟ್ವಾಳದ ತುಂಬೆ ಯಲ್ಲಿ ನೇತ್ರಾವತಿ ನೀರಿನಮಟ್ಟದಲ್ಲಿ ಏರಿಕೆ ಕಾಣಿಸಿಕೊಂಡಿದೆ. ಕರಾವಳಿಯಲ್ಲಿ ಗಂಟೆಗೆ 35ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ. ಜುಲೈ 18ರಿಂದ ಮತ್ತು ಅದರ ಮುಂದಿನ 3 ಅಥವಾ 4 ದಿನಗಳ ಕಾಲ ಉತ್ತರ ಒಳನಾಡಿನ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ದಕ್ಷಿಣ ಒಳನಾಡು ಅಲ್ಲಲ್ಲಿ ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜುಲೈ 25ರ ವರೆಗೂ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾಣ ಇಲಾಖೆ ಮಾಹಿತಿ ನೀಡಿದೆ.

----------------

ದ.ಕ ಜಿಲ್ಲೆಯಲ್ಲಿ ಸರಾಸರಿ 54.4 ಮಿ.ಮೀ.ಮಳೆ

ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ 27.50 ಮೀಟರ್ ಹಾಗೂ ಬಂಟ್ವಾಳದ ತುಂಬೆಯಲ್ಲಿ ನೇತ್ರಾವತಿ ನದಿ 6.2 ಮೀಟರ್‌ನಲ್ಲಿ ಹರಿಯುತ್ತಿದೆ. ದ.ಕ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿಯಲ್ಲಿ ಗರಿಷ್ಠ 70.1 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 54.4 ಮಿ.ಮೀ. ಆಗಿದೆ. ಬಂಟ್ವಾಳ 44.2 ಮಿ.ಮೀ, ಮಂಗಳೂರು 38.1 ಮಿ.ಮೀ, ಪುತ್ತೂರು 48.3 ಮಿ.ಮೀ, ಸುಳ್ಯ 59.2 ಮಿ.ಮೀ, ಮೂಡುಬಿದಿರೆ 59.5 ಮಿ.ಮೀ, ಕಡಬ 47.4 ಮಿ.ಮೀ, ಮೂಲ್ಕಿ 25.8 ಮಿ.ಮೀ. ಉಳ್ಳಾಲ 35.6 ಮಿ.ಮೀ. ಮಳೆ ದಾಖಲಾಗಿದೆ.