ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ತಾಲೂಕು ಕಚೇರಿಯಲ್ಲಿ ಶಾಸಕರ ಕಚೇರಿಯನ್ನು ಶಾಸಕ ಡಾ.ಮಂತರ್ ಗೌಡ ಭಾನುವಾರ ಉದ್ಘಾಟಿಸಿದರು. ವಿ.ಪಿ.ಶಶಿಧರ್, ಗೋವಿಂದಪ್ಪ, ಪ್ರಕಾಶ್, ಲಿಂಗಮ್ಮ, ಸುಧಾ, ರಾಜೀವ್, ಚಂದ್ರಶೇಖರ್ ಇತರರು ಇದ್ದರು. 
ಜಿಲ್ಲೆ

ಜನರ ಬಳಿ ತೆರಳಿ ಸ್ಪಂದಿಸುವವನೇ ನಿಜವಾದ ಜನಪ್ರತಿನಿಧಿ

ಕುಶಾಲನಗರ: ಜನರ ಬಳಿ ತೆರಳಿ ಅವರ ಸಂಕಷ್ಟಗಳಿಗೆ ಸ್ಪಂದಿಸುವವನೇ ನಿಜವಾದ ಜನಪ್ರತಿನಿಧಿಯಾಗಲು ಸಾಧ್ಯ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.

ಕುಶಾಲನಗರ ಸಮೀಪದ ಮುಳ್ಳುಸೋಗೆಯ ಹಳೇ ಗ್ರಾಮ ಪಂಚಾಯಿತಿ ಕಟ್ಟಡದ ಸಭಾಂಗಣದಲ್ಲಿ ನೂತನ ಶಾಸಕರ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಜನರು ಸಂಕಷ್ಟ ನಿವಾರಣೆಗಾಗಿ ಬಂದಾಗ ತಕ್ಷಣ ಅವರಿಗೆ ಸ್ಪಂದಿಸುವ ಮನೋಭಾವವನ್ನು ಪ್ರತಿಯೊಬ್ಬ ಜನಪ್ರತಿನಿಧಿ ಬೆಳೆಸಿಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಉತ್ತಮ ಜನಪ್ರತಿನಿಧಿಯಾಗಲು ಸಾಧ್ಯ ಎಂದು ತಿಳಿಸಿದರು.

ನೆಲ್ಯಹುದಿಕೇರಿಯಿಂದ ಶಿರಂಗಾಲದವರೆಗಿನ ಜನರು ತಾಲೂಕು ಮುಖ್ಯ ಕೇಂದ್ರ ಸೋಮವಾರಪೇಟೆಗೆ ಅಥವಾ ಜಿಲ್ಲಾ ಮುಖ್ಯ ಕೇಂದ್ರ ಮಡಿಕೇರಿಗೆ ವಾರಕ್ಕೊಮ್ಮೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕುಶಾಲನಗರ ತಾಲೂಕು ಮುಖ್ಯ ಕೇಂದ್ರವಾಗಿದೆ. ಇದೇ ಮೊದಲ ಬಾರಿಗೆ ಶಾಸಕರ ಕಚೇರಿ ಉದ್ಘಾಟನೆಯಾಗಿದ್ದು ನಮ್ಮ ಆಪ್ತ ಸಹಾಯಕರು ಜನರ ಸಂಕಷ್ಟಗಳಿಗೆ ದೂರು-ದುಮ್ಮಾನಗಳಿಗೆ ಸ್ಪಂದಿಸಲಿದ್ದಾರೆ. ಕಚೇರಿಯಲ್ಲಿ ರಾಜಕೀಯ ಪ್ರೇರಿತರಾಗಿ ಕರ್ತವ್ಯ ನಿರ್ವಹಿಸದೆ ರಾಜಕೀಯ ರಹಿತವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕೆಂದು ತಿಳಿಸಿದರು.

ಕುಶಾಲನಗರಕ್ಕೆ ಈಗಾಗಲೇ ಬಸ್ ಡಿಪೋಗಾಗಿ 10 ಕೋಟಿ ರೂ. ಮಂಜೂರಾಗಿದೆ. ಕಾವೇರಿ ನದಿ ಸುತ್ತ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕುಡಿಯಲು ಕಾವೇರಿ ನದಿ ನೀರಿನ ಸಂಪರ್ಕ ಕಾರ್ಯವನ್ನು ಪೂರೈಸಲಾಗುತ್ತದೆ. ವಾರದಲ್ಲಿ ಸಂತೆ ದಿನವಾದ ಮಂಗಳವಾರದಂದು ನಾನು ಕುಶಾಲನಗರದ ಕಚೇರಿಯಲ್ಲಿ ಜನರಿಗೆ ಲಭ್ಯವಿರುತ್ತೇನೆ ಎಂದು ತಿಳಿಸಿದರು.

ಕಚೇರಿ ಉದ್ಘಾಟನೆಗೂ ಮೊದಲು ಸಮೀಪದ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದುಕೊಂಡರು. ಬೆಳಗ್ಗೆ ಪುರಸಭೆ ಸದಸ್ಯ ಎಂ.ಕೆ.ದಿನೇಶ್ ದಂಪತಿ ಗಣಪತಿ ಹೋಮ ಮಾಡಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕೆ.ಕೆ.ಮಂಜುನಾಥ್‌ಕುಮಾರ್. ನಟೇಶ್ ಗೌಡ, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಎಚ್.ಕೆ.ಶಿವಶಂಕರ, ಯುವ ಘಟಕದ ಅಧ್ಯಕ್ಷ ಕಿರಣ್‌ಕುಮಾರ್ ಇನ್ನಿತರರು ಹಾಜರಿದ್ದರು.