ಜಿಲ್ಲೆ

ಬಡಜನರ ಬದುಕಿಗೆ ಆಶಾಕಿರಣ ‘ಗ್ಯಾರಂಟಿ’

ರೋಣ: ಗ್ಯಾರಂಟಿ ಯೋಜನೆಗಳು ಬಡಜನರ ಬದುಕಿಗೆ ಆಶಾಕಿರಣವಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಮಿಥುನ ಪಾಟೀಲ ಹೇಳಿದರು.

ತಾಲೂಕಿನ ಚಿಕ್ಕಮಣ್ಣೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ಇಂದು ಎಲ್ಲೆಡೆ ಮಹಿಳೆಯರೇ ಮನೆಯ ಯಜಮಾನರಾಗಿ ಕಾರ್ಯನಿರ್ವಹಿಸುತ್ತಿರುವುದು ನಮ್ಮ ಸರ್ಕಾರ ಕೊಟ್ಟ ಪಂಚ ಗ್ಯಾರಂಟಿಗಳು ಕಾರಣವಾಗಿವೆ’ ಎಂದರು.

ಗದಗ ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಪರಶುರಾಮ ಅಳಗವಾಡಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಜಿಲ್ಲೆಯ ಪ್ರತಿ ನಾಗರಿಕರಿಗೂ ತಲುಪಿಸಲು ಕಾರ್ಯಕ್ರಮ ಆಯೋಜಿಸಿ ವ್ಯಾಪಕ ಪ್ರಚಾರ ಮಾಡಿ ಅರಿವು ಮೂಡಿಸಲಾಗುತ್ತಿದೆ. ನಮ್ಮೊಂದಿಗೆ ಜನರು ಕೂಡ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರಿಗೂ ತಲುಪಿಸಲು ಶ್ರಮಿಸಬೇಕು. ಇದರಿಂದ ಶೇ. 100ರಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ತಾಪಂ ಇಒ ಚಂದ್ರಶೇಖರ ಕಂದಕೂರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಅಧಿಕಾರಿಗಳ ಕಾರ್ಯ ಬಹು ದೊಡ್ಡದು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆ ಸೌಲಭ್ಯದಿಂದ ಯಾರೂ ವಂಚಿತರಾಗಬಾರದು. ಒಂದು ವೇಳೆ ಯೋಜನೆಯಿಂದ ಅವರ ಹೆಸರು ಕೈಬಿಟ್ಟಿದ್ದರೆ, ಮತ್ತೆ ಸೇರಿಸಿ ಅವರು ಸರ್ಕಾರದ ಪಂಚ ಗ್ಯಾರಂಟಿ ಸೌಲಭ್ಯ ತಲುಪುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಿಡಿಒ ಆರ್.ಎಂ. ಹುಣಸಿಮರದ, ಶರಣಪ್ಪ ಕುರಿಯವರ, ಗ್ರಾಪಂ ಅಧ್ಯಕ್ಷೆ ಮಂಜುಳಾ ಪಾಟೀಲ, ಶಾಂತವ್ವ ಪಾಟೀಲ, ನಾಗರಾಜ ಗುದ್ನೆಪ್ಪನವರ, ರಮೇಶ ಪಟ್ಟೇದ, ಶಾಂತವ್ವ ಹಿರೇಮಣ್ಣುರ, ಬಸವರಾಜ ಕಾತರಕಿ ಇತರರು ಇದ್ದರು.