ಕಿಕ್ಕೇರಿಯಲ್ಲಿ ಕನ್ನಡ ಕಲಾ ಸಂಘ, ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಬುಧವಾರ ಕವಿ ನಿಸಾರ್ ಅಹಮದ್ ಜನ್ಮದಿನ ಆಚರಿಸಲಾಯಿತು. ಗಾಯಕ ಕಿಕ್ಕೇರಿ ಡಾ. ಕೃಷ್ಣಮೂರ್ತಿ, ತ್ರಿವೇಣಿ, ಕವಿತಾ, ಮಹೇಶ್, ಸತೀಶ್ ಇದ್ದರು.  
ಜಿಲ್ಲೆ

ಬದುಕಿಗೆ ಸಾರ ತುಂಬಿದ ಅಪರೂಪದ ಕವಿ

ಕಿಕ್ಕೇರಿ: ನವ್ಯಕಾಲದ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಭಾವೈಕ್ಯದೊಂದಿಗೆ ಸಾರವಿಲ್ಲದ ಬದುಕಿಗೆ ಸಾರವನ್ನು ತುಂಬಿದ ಅಪರೂಪದ ಕವಿ ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ, ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಇಲ್ಲಿನ ಕನ್ನಡ ಕಲಾಸಂಘ, ಸ್ಪಂದನಾ ಫೌಂಡೇಷನ್, ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಬುಧವಾರ ಆಯೋಜಿಸಿದ್ದ ನಿಸಾರ್ ಅಹಮದ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜಕ್ಕೆ ಒಳಿತು ಮಾಡಿದ ಸಾಧಕರ ಪರಿಚಯ ಮಕ್ಕಳಿಗೆ ಮೊದಲು ಮಾಡಬೇಕಿದೆ. ನಿತ್ಯೋತ್ಸವ ಕವಿಯ ಮೂಸೆಯಲ್ಲಿ ಮೂಡಿದ ಜೋಗದ ಸಿರಿ ಬೆಳಕಿನಲ್ಲಿ ಸಮಗ್ರ ಕನ್ನಡ ನಾಡಿನ ಸಿರಿ, ಸಂಪತ್ತು, ಸಂಸ್ಕೃತಿ, ಭಾವೈಕ್ಯ, ಆಚಾರ, ವಿಚಾರ ಎಲ್ಲವೂ ನವಿರಾಗಿ ಮೂಡಿದೆ. ಕುರಿಗಳು ಸಾರ್ ಕುರಿಗಳು ಇಡೀ ರಾಜಕೀಯ ಪ್ರತಿನಿಧಿಗಳನ್ನು ಬಡಿದೆಬ್ಬಿಸಿ ಎಲ್ಲರ ನಾಲಿಗೆಯಲ್ಲಿ ಗುನುಗುವಂತೆ ಮಾಡಿದೆ ಎಂದು ತಿಳಿಸಿದರು.

ಹಿಂದು ಸಂಸ್ಕೃತಿ, ಆಚರಣೆಗಳನ್ನು ಪ್ರೀತಿಸುತ್ತಿದ್ದ ಸಮರಸದ ಸಮನ್ವಯ ಕವಿಯಾಗಿ ಇವರ ಬೆಣ್ಣೆ ಕದ್ದ ನಮ್ಮ ಕೃಷ್ಣ ಗೀತೆ ಸಾಹಿತ್ಯ ಲೋಕದಲ್ಲಿ ಹೊಸ ಭಾಷ್ಯವನ್ನು ಬರೆದು ಜನಪ್ರಿಯತೆ ಗಳಿಸಿದೆ ಎಂದು ತಿಳಿಸಿದರು. ಕವಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೀತನಮನ ಅರ್ಪಿಸಲಾಯಿತು.

ಟ್ರಸ್ಟಿ ತ್ರಿವೇಣಿ, ಸಮಾಜ ಸೇವಾಕರ್ತರಾದ ಗುರುಮೂರ್ತಿ, ಸತೀಶ್, ಮಹೇಶ್, ಕವಿತಾ ಇದ್ದರು.