ಪಂಚನಹಳ್ಳಿ: ಕನ್ನಡ ಭಾಷೆಯ ಬೆಳವಣಿಗೆಗೆ ಸಾಹಿತ್ಯದ ಕೊಡುಗೆ ಅಪಾರವಾಗಿದ್ದು, ಹಿರಿಯ ಸಾಹಿತಿಗಳು,ಕವಿಗಳಿಂದ ಕನ್ನಡ ಭಾಷೆ ಶ್ರೀಮಂತಗೊಂಡಿದೆ ಎಂದು ಸಾಹಿತಿ ಮಂಜುನಾಥ್ ಬೆಳವಾಡಿ ಹೇಳಿದರು.
ಪಂಚನಹಳ್ಳಿಯ ಸ್ನೇಹವಿದ್ಯಾ ಸಂಸ್ಥೆ ಶಾಲೆ ಆವರಣದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ನುಡಿ ನಿತ್ಯೋತ್ಸವದ ಸಮಾರೋಪ ಸಮಾರಂಭ ಹಾಗೂ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಭಾವನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಕನ್ನಡದ ಮನಸ್ಸುಗಳನ್ನು ಂದುಗೂಡಿಸುವ ಜತೆಗೆ ಭಾವನೆಗಳನ್ನು ಬೆಸೆಯಲು ಸಾಧ್ಯವಾಗುತ್ತದೆ. ಮಕ್ಕಳಿಗೂ ಭಾಷಾ ಪ್ರೇಮ ಮೈಗೂಡಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗಿವೆ ಎಂದರು.
ನುಡಿ ನಿತ್ಯೋತ್ಸವ ಕಾರ್ಯಕ್ರಮ ನವಂಬರ್‌ನಲ್ಲಿ ಪ್ರತಿ ದಿನ ವಿಶೇಷ ಕಾರ್ಯಕ್ರಮಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಕವಿಗಳ ಪರಿಚಯ ಮಾಡಿಕೊಡಲಾಗುತ್ತದೆ. ಕಲಿಕೆ ಹಂತದಲ್ಲಿ ಮಕ್ಕಳು ಶಿಕ್ಷಕರ ನಡುವೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಈ ಹಂತದಲ್ಲಿ ಕನ್ನಡ ಭಾಷೆಯನ್ನು ಸಾಹಿತ್ಯಕವಾಗಿ ಬೆಳೆಸಲು ಮಕ್ಕಳು ಹೆಚ್ಚು ಅಧ್ಯಯನ ಶೀಲರಾಗಬೇಕಿದೆ ಎಂದರು.
ಪಂಚನಹಳ್ಳಿ ಗ್ರಾಪಂ ಅಧ್ಯಕ್ಷ ಪಿ.ಆರ್.ರಂಗನಾಥ್ ಮಾತನಾಡಿ, ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ .ಸ್ನೇಹ ವಿದ್ಯಾ ಸಂಸ್ಥೆ ರಾಜ್ಯೋತ್ಸವ ಹಬ್ಬವನ್ನು ಒಂದು ತಿಂಗಳಿನಿಂದ ಸ್ಪರ್ಧಾತ್ಮಕ ರೂಪದಲ್ಲಿ ಆಯೋಜಿಸಿದೆ. ಇಂಗಿಷ್ ಭಾಷೆ ವ್ಯಾಮೋಹದ ನಡುವೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲ ಶಾಲೆಗಳಿಗೆ ಸ್ನೇಹ ವಿದ್ಯಾ ಸಂಸ್ಥೆ ಮಾದರಿಯಾಗಿದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದರು.
ಪ್ರಾಚಾರ್ಯೆ ಶಾಲಿನಿ, ಸಮಿತಾ, ಶಿಕ್ಷಕರಾದ ಕಲ್ಲೇಶ್, ರವಿ ಮತ್ತಿತರಿದ್ದರು.