ಬೆಂಗಳೂರು: ಕರ್ನಾಟಕ ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಒಟ್ಟು 6 ಮಂದಿ ಸಲ್ಲಿಸಿದ್ದ ನಾಮಪತ್ರಗಳು ಕ್ರಮಬದ್ಧ ಹಾಗೂ ಅಂಗೀಕೃತವಾಗಿವೆ ಎಂದು ಚುನಾವಣಾಧಿಕಾರಿಯೂ ಆದ ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದ್ದಾರೆ.
ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್. ಕಾಂಗ್ರೆಸ್ನಿಂದ ಜೈರಾಮ್ ರಮೇಶ್, ಮನ್ಸೂರ್ ಅಲಿ ಖಾನ್. ಜೆಡಿಎಸ್ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧಿಸಿದ್ದು, ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶುಕ್ರವಾರ ಹಣಾಹಣಿಯ ಕಣ ನಿಚ್ಚಳವಾಗಲಿದೆ.
ಮತ ಮೌಲ್ಯದ ಲೆಕ್ಕಾಚಾರದಂತೆ ಗೆಲುವಿಗೆ ಒಬ್ಬ ಅಭ್ಯರ್ಥಿ 45 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯಬೇಕು. ಒಟ್ಟು 224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 119 (ಸ್ಪೀಕರ್ ಹೊರತುಪಡಿಸಿ) ಶಾಸಕರು, ಇಬ್ಬರು ಸಹ ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ 69 ಶಾಸಕರ ಜತೆಗೆ ಒಬ್ಬ ಸಹ ಸದಸ್ಯ ಹಾಗೂ ಜೆಡಿಎಸ್ನ 32 ಶಾಸಕರಿದ್ದಾರೆ. ಸಂಖ್ಯಾಬಲದಂತೆ ಬಿಜೆಪಿ ಎರಡು, ಕಾಂಗ್ರೆಸ್ ಒಂದು ಸ್ಥಾನ ನಿರಾಯಾಸವಾಗಿ ಗೆಲ್ಲಲಿದ್ದು, ಜೆಡಿಎಸ್ 13 ಮತಗಳ ಕೊರತೆಯಿದ್ದರೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ.
ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಕಾಂಗ್ರೆಸ್ನ ಜೈರಾಮ್ ರಮೇಶ್ ಜಯ ಸಾಧಿಸುವುದು ಖಚಿತವಾಗಿದ್ದು, ಇನ್ನೊಂದು ಸ್ಥಾನಕ್ಕಾಗಿ ಲೆಹರ್ ಸಿಂಗ್ ಸಿರೋಯಾ, ಮನ್ಸೂರ್ ಖಾನ್ ಮತ್ತು ಕುಪೇಂದ್ರ ರೆಡ್ಡಿ ನಡುವೆ ನಡೆಯಲಿರುವ ಕುಸ್ತಿ ಕುತೂಹಲ ಕೆರಳಿಸಿದೆ.