ಜಿಲ್ಲೆ

ಅವಾಂತರ ಸೃಷ್ಟಿಸಿದ ಮಳೆರಾಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಒಂದು ಕಡೆ ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕಲು ಜನರು ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಮನೆಯಿಂದ ಹೊರ ಬರದಂತಹ ಸ್ಥಿತಿ ಇದೆ.. ಈ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ನರಗದಲ್ಲಿ.
ಮಂಗಳವಾರ ರಾತ್ರಿಯಿಂದ ಗುರುವಾರ ಬೆಳಗಿನಜಾವವರೆಗೂ ಸತತವಾಗಿ ಸುರಿದ ಮಳೆಯು ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿವೆ. ನಗರದ ಹೊರ ಪ್ರದೇಶದಲ್ಲಿನ ಬಹುತೇಕ ಬಡಾವಣೆಗಳು ಜಲಾವೃತವಾಗಿದ್ದರಿಂದ ಜನರು ಪರದಾಡುವಂತಾಗಿದೆ. ಗುರುವಾರ ಬೆಳಗ್ಗೆಯಿಂದ ಮಳೆ ಕೊಂಚ ಬಿಡುವು ನೀಡಿದ್ದರಿಂದ ನೀರಿನ ಹರಿವು ಸ್ವಲ್ಪ ತಗ್ಗಿದೆ. ಆದರೆ ಮಳೆಯಿಂದ ಮನೆಗಳಲ್ಲಿನ ರಾಡಿ ಸ್ವಚ್ಛಗೊಳಿಸುವಲ್ಲಿ ಜನರು ಹೈರಾಣಾಗಿದ್ದಾರೆ.
ಭಾವಿಕಟ್ಟಿ ಪ್ಲಾಟ್​, ಸರೋವರನಗರ, ಸಿದ್ದಾರೂಢ ಕಾಲನಿ, ಸಾಧೂನವರ ಎಸ್ಟೇಟ್​, ಹೀರೇಮಠ ಲೇಔಟ್​, ಮಾಕಡವಾಲೆ ಪ್ಲಾಟ್​, ಬಸವನಗರ, ಗೌಡರ ಕಾಲನಿ, ಜಾಧವ ಲೇಔಟ್​, ಕೆಲಗೇರಿ, ಸಂಪಿಗೆನಗರ, ಶಿರಡಿನಗರ, ಸಿ.ಬಿ. ನಗರ, ಶ್ರೀಶ ಲೇಔಟ್​, ತಪೋವನ ಬಳಿಯ ಕೆಐಡಿಬಿ ಕಾಲನಿ ಸೇರಿ ತಗ್ಗು ಪ್ರದೇಶಗಳಲ್ಲಿನ ಕೆಲ ಬಡಾವಣೆಗಳು ಕೆರೆಗಳಂತೆ ಕಾಣುತ್ತಿವೆ.
ಕಾಲುವೆಗಳಿಗೆ ಹರಿಯಬೇಕಾದ ಮಳೆ ನೀರು ರಸ್ತೆಗಳಲ್ಲೇ ಹರಿಯುತ್ತಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಬಿಆರ್​ಟಿಎಸ್​ ರಸ್ತೆ ನಿರ್ಮಾಣ ಸಮಯದಲ್ಲಿ ಮಳೆ ನೀರು ಸರಿಯಾಗಿ ಹರಿಯುವಂತೆ ವ್ಯವಸ್ಥೆ ಮಾಡದ ಕಾರಣ ರಸ್ತೆಗಳಿಗೆ ನುಗ್ಗುತ್ತಿವೆ. ರಸ್ತೆಯಲ್ಲಿ ರಭಸವಾಗಿ ಹರಿದ ನೀರು ಕಟ್ಟಡಗಳಿಗೆ ನುಗ್ಗಿದ ಪರಿಣಾಮ ವಾಹನಗಳು ನೀರಿನಲ್ಲಿ ತೇಲುವಂತಹ ಸ್ಥಿತಿ ಉದ್ಭವಿಸಿದೆ.
*ಬೈಪಾಸ್​ ಬಂದ್​: ರಸ್ತೆ ಅಗಲೀಕರಣ ನಿಮಿತ್ತ ಹು-ಧಾ ಬೈಪಾಸ್​ ರಸ್ತೆ ಕಾಮಗಾರಿ ಕೆಲ ದಿನಗಳಿಂದ ಆರಂಭವಾಗಿದೆ. ಕಾಮಗಾರಿಗಳಿಂದ ಅಲ್ಲಲ್ಲಿ ರಸ್ತೆ ಅಗೆದ ಪರಿಣಾಮ ಇಡೀ ರಸ್ತೆ ಜಲಾವೃತವಾಗಿ ಬುಧವಾರ ರಾತ್ರಿ ಸಾರಿಗೆ ಬಸ್​ ಸಿಲುಕಿಕೊಂಡಿತ್ತು. ಬಸ್​ನಲ್ಲಿದ್ದ 30 ಜನರನ್ನು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಿಯರ ಸಹಕಾರದಿಂದ ರಕ್ಷಿಸಿದ್ದಾರೆ. ಹೀಗಾಗಿ ಗುರುವಾರ ಬೆಳಗ್ಗೆವರೆಗೂ ರಸ್ತೆಯಲ್ಲಿನ ಸಂಚಾರ ಬಂದಾಗಿತ್ತು. ಮಧ್ಯಾಹ್ನದಿಂದ ಸಂಚಾರ ಆರಂಭಿಸಲಾಗಿದೆ.
ಫೀಲ್ಡಿಗಿಳಿದ ಮೇಯರ್​: ಬುಧವಾರ ರಾತ್ರಿಯಿಂದ ಸುರಿದ ಮಳೆಗೆ ಸೃಷ್ಟಿಯಾದ ಅವಾಂತರಗಳ ವೀಕ್ಷಣೆಗೆ ಮೇಯರ್​ ರಾಮಣ್ಣ ಬಡಿಗೇರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಗುರುವಾರ ನಗರ ಸಂಚಾರ ನಡೆಸಿ ಪರಿಶೀಲನೆ ನಡೆಸಿದರು. ಎನ್​ಟಿಟಿಎಫ್ ಬಳಿ ಬಿಆರ್​ಟಿಎಸ್​ ರಸ್ತೆ ನಿರ್ಮಾಣ ಸಮಯದಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಜನರು ಸಾಕಷ್ಟು ಪರದಾಡುವಂತಾಗಿದೆ. ಒಂದು ತಾಸು ಮಳೆಯಾದರೆ ಸಾಕು ಕಟ್ಟಡಗಳಿಗೆ ನೀರು ನುಗ್ಗುವಂತಹ ಸ್ಥಿತಿ ಇದೆ. ಹೀಗಾಗಿ ಸಮಗ್ರ ಪರಿಶೀಲನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕಾಮಗಾರಿ ಆರಂಭಿಸಲು ಸೂಚಿಸಿದ್ದಾರೆ.