ಬೆಂಗಳೂರು: 108 ಆಂಬುಲೆನ್ಸ್ ಸೇವೆಗೆ ಸರ್ಕಾರ ನೀಡುತ್ತಿರುವ ಹಣಕ್ಕೆ ತಕ್ಕಂತಹ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಷಾದಿಸಿದರು. ಅಲ್ಲದೆ, ಈ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಾಹಿತಿ ತಂತ್ರಜ್ಞಾನ ವಲಯದ ಐಡೆಕ್ ಕಂಪನಿ ಪ್ರತಿನಿಧಿಗಳು, ತಜ್ಞರು, ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಗುತ್ತಿಗೆ ಕರಾರು ಕರಡು ಕುರಿತ ಸಭೆ ನಡೆಸಿದ ಸಚಿವರು, ನಿರೀಕ್ಷೆಗೆ ತಕ್ಕಂತೆ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ ಎನ್ನುವ ದೂರುಗಳಿವೆ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮಾದರಿ ಆಗುವಂತಹ ವ್ಯವಸ್ಥೆ ಜಾರಿಗೊಳಿಸಬೇಕಿದೆ. ಅದಕ್ಕಾಗಿ ಹೊಸದಾಗಿ ಟೆಂಡರ್ ನೀಡುವಾಗ ಲೋಪಗಳಿಗೆ ಅವಕಾಶವಿಲ್ಲದಂತೆ ಜಾಗತಿಕ ಮಟ್ಟದ ಸೇವೆ ನೀಡುವ ಸಂಸ್ಥೆ, ಕಂಪನಿಗಳ ಒಕ್ಕೂಟಕ್ಕೆ ಗುತ್ತಿಗೆ ನೀಡಬೇಕು ಎಂದು ನಿರ್ದೇಶಿಸಿದರು.
ತುರ್ತು ಆರೋಗ್ಯ ಸೇವೆ ನೀಡುವಲ್ಲಿ ಆಂಬುಲೆನ್ಸ್ ಸೇವೆ ಮಹತ್ವದ್ದಾಗಿದೆ. ಸದ್ಯ ನಮ್ಮಲ್ಲಿರುವ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿದ್ದು, ಅವುಗಳನ್ನು ನಿವಾರಿಸಿ ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಗುಣಮಟ್ಟದ ನಿರ್ವಹಣಾ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಆರ್ಥಿಕ ಮತ್ತು ತಾಂತ್ರಿಕವಾಗಿ ಸಶಕ್ತವಾದ ಕಂಪನಿಗಳು ಮಾತ್ರವೇ ಬಿಡ್ನಲ್ಲಿ ಪಾಲ್ಗೊಳ್ಳಲು ಅವಕಾಶ ಇರುವಂತಹ ಷರತ್ತುಗಳನ್ನು ವಿಧಿಸಬೇಕು. ಒಂದು ಲಕ್ಷ ಜನಸಂಖ್ಯೆಯನ್ನು ಮಾನದಂಡವಾಗಿ ಇಟ್ಟುಕೊಳ್ಳುವ ಬದಲಿಗೆ ಭೌಗೋಳಿಕ ಸವಾಲು ಮತ್ತು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕರಾರು ವಿಧಿಸಬೇಕು. ಕರೆ, ಸಂದೇಶ ನೀಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ
ಧಾವಿಸಿ ರೋಗಿಯನ್ನು ಕರೆದೊಯ್ಯುವಂತಿರಬೇಕು. ಪ್ರಾಥಮಿಕ ಚಿಕಿತ್ಸೆ ನೀಡಲು ತರಬೇತಿ ಪಡೆದ ಸಿಬ್ಬಂದಿ, ಉಬರ್ ಮತ್ತು ಓಲಾ ಮಾದರಿಯ ಆಪ್ ವ್ಯವಸ್ಥೆ ಇರಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಧಿಸಲು ಸಚಿವರು ತಿಳಿಸಿದರು. ಐ ಡೆಕ್ ಕಂಪನಿ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಸಭೆಯಲ್ಲಿದ್ದರು.
ಗೋಹತ್ಯೆ ನಿಷೇಧ, ಇನ್ನಷ್ಟು ಚರ್ಚೆ ಅಗತ್ಯ
ಬೆಂಗಳೂರು: ಗೋಹತ್ಯೆಯಿಂದ ಪಾರಂಪರಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗುವ ಅಗತ್ಯವಿದ್ದು, ಈ ಬಗ್ಗೆ ಇನ್ನಷ್ಟು ಚರ್ಚೆಯಾಗಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು. ಗೋವು ಒಂದು ಪವಿತ್ರ ಪ್ರಾಣಿ ಎಂದು ನಂಬುವ ದೇಶ ನಮ್ಮದು. ಗೋವನ್ನು ಕುಟುಂಬದ ಸದಸ್ಯರಂತೆ ಗೌರವಿಸುತ್ತೇವೆ. ಗೋಹತ್ಯೆ ಹಿಂದುಗಳ ಸಂಪ್ರದಾಯಕ್ಕೆ ವಿರುದ್ಧವಾದ ಕ್ರಮವಾಗಿದೆ. ಆದ್ದರಿಂದ ಗೋಹತ್ಯೆಗೆ ಅವಕಾಶ ನೀಡುವುದು ಸರಿಯಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಅಧಿಕಾರಿಗಳ ಸಭೆ: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ, ಇಂದ್ರಧನುಷ್ ಲಸಿಕೆ ಅಭಿಯಾನ ಮೊದಲಾದ ಯೋಜನೆಗಳ ಕುರಿತು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರೊಂದಿಗೆ ಸಚಿವ ಡಾ.ಕೆ.ಸುಧಾಕರ್ ರ್ಚಚಿಸಿದರು.