ಜಿಲ್ಲೆ

ರೇಷ್ಮೆ ಬೆಳೆಗಾರರ ಸಮಸ್ಯೆಗೆ ಶ್ರೀಘ್ರ ಪರಿಹಾರ

ಗಂಗಾಧರ ಬಿ ವಿ

* ಜಿಲ್ಲೆಯ ರೈತರಿಗೆ ಸಚಿವ ಕೆ. ವೆಂಕಟೇಶ್​ ಭರವಸೆ

* ರೈತರ ಆಶಯಕ್ಕೆ ತಕ್ಕಂತೆ ಇಲಾಖೆ ಕೆಲಸ ಮಾಡುತ್ತಿಲ್ಲವೆಂದು ಬೇಸರ

ರಾಮನಗರ

ರೇಷ್ಮೆ ಬೆಳಗಾರರ ಸಮಸ್ಯೆಗೆ ಶ್ರೀಘ್ರವೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಳಿ ಮತ್ತೊಮ್ಮೆ ಚರ್ಚೆ ನಡೆಸಲಾಗುವುದು ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್​ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಭರವಸೆ ನೀಡಿದರು.

ಜಿಪಂ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ರೇಷ್ಮೆ ಬೆಳೆಗಾರರು, ರೀಲರ್​ಗಳೊಂದಿಗಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರೇಷ್ಮೆ ಇಲಾಖೆಯ ಹಣಕಾಸಿನ ತೊಂದರೆಗಳನ್ನು ನಿವಾರಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ, ರೇಷ್ಮೆ ಬೆಳೆಗಾರರು, ರೀಲರ್ಸ್​ಗಳಿಗೆ ಒಳ್ಳೆಯದನ್ನು ಮಾಡಬೇಕು. ಈ ಉದ್ದಿಮೆ ಉಳಿಯಲು ಸಹಾಯ ಮಾಡಬೇಕು ಎನ್ನುವುದನ್ನು ಅರಿತು ಕೆಲಸ ಮಾಡಲಾಗುತ್ತಿದೆ, ಈ ದಿಸೆಯಲ್ಲಿ ಉಪಮುಖ್ಯಮಂತ್ರಿಗಳು ಕೈಜೋಡಿಸಿದ್ದಾರೆ, ಮುಂಬರುವ ದಿನಗಳಲ್ಲಿ ರೇಷ್ಮೆ ಬೆಳೆಗಾರರಿಗೆ ಎಲ್ಲ ರೀತಿಯ ಸೌಕರ್ಯ ಹಾಗೂ ರೀಲರ್ಸ್​ಗಳಿಗೆ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಹೊಸ ಮಾರ್ಕೆಟ್​ಗೆ ಹೋಗಲ್ಲ

ಪ್ರತಿ ಮೂರು ತಿಂಗಳಿಗೊಮ್ಮೆ ರೇಷ್ಮೆ ಬೆಳೆಗಾರರು ಹಾಗೂ ರೀಲರ್ಸ್​ಗಳ ಸಭೆ ನಡೆಸಿ, ಸಮಸ್ಯೆ ಆಲಿಸಬೇಕು. ನಗರದಲ್ಲಿರುವ ಮಾರುಕಟ್ಟೆಯಲ್ಲಿ ಪ್ರತಿದಿನ 2.5 ರಿಂದ 3 ಕೋಟಿ ರೂ. ವಹಿವಾಟು ನಡೆಯುತ್ತಿದ್ದು, 6 ಲಕ್ಷಕ್ಕೂ ಹೆಚ್ಚು ಮೊತ್ತ ತೆರಿಗೆ ಪಾವತಿಲಾಗುತ್ತಿದೆ. ಆದ ಕಾರಣ ಹಳೆಯ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಒದಗಿಸಿಕೊಡಬೇಕು. ಶೌಚಗೃಹ, ಕ್ಯಾಂಟೀನ್​, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಇತರ ಸೌಕರ್ಯ ಒದಗಿಸಬೇಕು, ಇಲಾಖೆಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಹೊಸ ಮಾರುಕಟ್ಟೆಗೆ ಹೋಗುವುದಿಲ್ಲ ಎಂದು ವೇದಿಕೆಯಲ್ಲಿ ಸಚಿವರ ಮುಂದೆ ಶಾಸಕ ಇಕ್ಬಾಲ್​ ಹುಸೇನ್​ ಸ್ಪಷ್ಟಪಡಿಸಿದರು.

ಸಮಸ್ಯೆಗಳ ಸರಮಾಲೆ

ಬಿತ್ತನೆ ಕ್ಷೇತ್ರವಾದ ಮಾಗಡಿಯಲ್ಲಿ ಗುಣಮಟ್ಟದ ಬಿತ್ತನೆ ನೀಡುತ್ತಿಲ್ಲ, ಜತೆಗೆ ಗೂಡಿಗೆ ನೀಡುತ್ತಿರುವ ಪ್ರೋತ್ಸಾಹಧನವೂ ಸಾಲುತ್ತಿಲ್ಲ, ರೋಗ ನಿಯಂತ್ರಣವೂ ಆಗುತ್ತಿಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಿತ್ತನೆ ಗೂಡು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ರೇಷ್ಮೆ ಬೆಳೆಯೇ ನಾಶವಾಗಲಿದೆ ಎನ್ನುವ ಎಚ್ಚರಿಕೆಯನ್ನು ರೈತ ಅಣ್ಣೇಗೌಡ ನೀಡಿದರು.

ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೇಷ್ಮೆ ಗೂಡು ಬೀದಿಯಲ್ಲಿ ದಲ್ಲಾಳಿಗಳ ಪಾಲಾಗುತ್ತಿದೆ. ಒಮ್ಮೆ ಹನಿ ನೀರಾವರಿ ಸೌಲಭ್ಯ ಪಡೆದರೆ ಮತ್ತೆ ಪಡೆಯುವಂತಿಲ್ಲ ಎನ್ನುವ ನಿಯಮವನ್ನು ಸಡಿಲ ಮಾಡಬೇಕು. ಅಂತರ ಬೇಸಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಿನಿ ಟ್ರಾ$್ಯಕ್ಟರ್​ಗಳನ್ನು ನೀಡಬೇಕು. ದರ ಕುಸಿತವಾದ ಸಂದರ್ಭದಲ್ಲಿ ನೀಡಲಾಗುತ್ತಿದ್ದ ಪ್ರೋತ್ಸಾಹ ಧನ ನಿಂತಿದೆ ಇದನ್ನು ಕೊಡಿಸಿ ಎಂದು ರೈತ ರಾಮಕೃಷ್ಣ ಆಗ್ರಹಿಸಿದರು.

ರೇಷ್ಮೆ ಬೆಳೆಗಾರ ಕೆ.ರವಿ ಮಾತನಾಡಿ, ಈ ಹಿಂದೆ ಡಾ.ಬಸವರಾಜ ಸಮಿತಿ ನೀಡಿದ ವರದಿ ಇನ್ನೂ ಜಾರಿ ಆಗಿಲ್ಲ. ಇದು ಜಾರಿಯಾದರೆ ರೇಷ್ಮೆ ಬೆಳೆಗಾರರ ಕಷ್ಟಗಳಿಗೆ ಪರಿಹಾರ ದೊರೆಯುತ್ತದೆ. ಸರ್ಕಾರ ಕಳೆದ ಎರಡು ವರ್ಷಗಳಿಂದ ಪರಿಕರ ಮತ್ತು ಔಷಧ ನೀಡಿಲ್ಲ. ಕೂಡಲೇ ಇವುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ರೀಲರ್​ಗಳ ಮುಖಂಡರಾದ ಕೀರಣಗೆರೆ ಜಗದೀಶ್​, ಕೃಷ್ಣಪ್ಪ ಮುಂತಾದವರು ನಮಗೆ ಸರ್ಕಾರವೇ ಅಗತ್ಯ ಸೌಲಭ್ಯ ನೀಡಿದರೆ ಖಂಡಿತವಾಗಿ ನಾವು ಕಡಿಮೆ ಬೆಲೆಗೆ ರೇಷ್ಮೆ ಚಾಕಿ ನೀಡುತ್ತೇವೆ. ನಮಗೂ ಉತ್ಪಾದನಾ ವೆಚ್ಚ ಹಾಗೂ ಅತಿ ಹೆಚ್ಚು ಸ್ಪರ್ಧೆ ಇರುವ ಕಾರಣ ಗುಣಮಟ್ಟದ ಬಿತ್ತನೆ ಗೂಡಿನ ಲಭ್ಯತೆಯ ಕೊರತೆಯೂ ಕಾಡುತ್ತಿದೆ ಎಂದರು.

ರೀಲರ್​ಗಳ ಸಂದ ಅಧ್ಯಕ್ಷ ಮೌಸಿಲ್​ ಅಲಿ ಮಾತನಾಡಿ, ಮಾರುಕಟ್ಟೆಯಲ್ಲಿ ಕಾನೂನು ಬಾಹಿರ ವಹಿವಾಟಿಗೆ ಕಡಿವಾಣ ಹಾಕಿ, ಕೆಲವು ರೀಲರ್​ಗಳು ಕಾನೂನು ಬಾಹಿರವಾಗಿ ಗೂಡು ಖರೀದಿ ಮಾಡಿ ಗೋಡೌನ್​ನಲ್ಲಿ ಇಟ್ಟುಕೊಂಡು ಚೀನಾ ಸೇರಿ ಇತರೆ ದೇಶಗಳಿಗೆ ರ್ತು ಮಾಡುತ್ತಿದ್ದಾರೆ. ಇಂದು ರೇಷ್ಮೆ ಬಿಚ್ಚಣಿಕೆ ಮಾಡಲು ಕೂಲಿ ಕಾರ್ಮಿಕರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ 120 ಮತ್ತು 200 ಎಂಡ್​ ಎಆರ್​ಎಂಗಳನ್ನು ಸಬ್ಸಿಡಿ ದರದಲ್ಲಿ ಅಳವಡಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ನೆರವು ನೀಡದಿದ್ದರೆ ನಾಶ

ಎಂಎಲ್​ಸಿ ಎಸ್​.ರವಿ ಮಾತನಾಡಿ, ರೀಲರ್​ಗಳು ಮತ್ತು ಬೆಳಗಾರರು ರೇಷ್ಮೆ ಬೆಳೆಯ ಪ್ರಮುಖ ಕೊಂಡಿಗಳು ಇವರಿಗೆ ಬೇಕಾದ ನೆರವು ನೀಡದಿದ್ದರೆ ಖಂಡಿತವಾಗಿ ಈ ಕ್ಷೇತ್ರ ಸಂಪೂರ್ಣ ನಾಶವಾಗಲಿದೆ. ಸಾವಿರಾರು ಕುಟುಂಬಗಳು ಬೀದಿಗೆ ಬಳಲಿವೆ. ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮದ ಜತೆಗೆ ಸಾಮೂಹಿಕ ಸಿಂಪಡಣಾ ಕಾರ್ಯಕ್ರಮ ಮಾಡಬೇಕು. ಮಿನಿ ಟ್ರಾ$್ಯಕ್ಟರ್​ಗಳ ವಿತರಣೆ ಹಾಗೂ ಎಆರ್​ಎಂಗಳ ವಿತರಣೆಗೆ ಕ್ರಮವಹಿಸಿ ಎಂದು ಒತ್ತಾಯಿಸಿದರು.

ಸಮಿತಿ ರಚನೆ

ಪ್ರೋತ್ಸಾಹ ಧನ ನೀಡಿಕೆ ಸಂಬಂಧ ಈಗಾಗಲೇ ಮತ್ತೊಂದು ಸಮಿತಿ ರಚಿಸಲಾಗಿದೆ. ಇದರ ವರದಿ ಬಂದ ನಂತರ ಕ್ರಮವಹಿಸಲಾಗುವುದು. ಈಗಾಗಲೇ ರೈತರಿಗೆ ನೆರವು ನೀಡುವ ಸಂಬಂಧ 85 ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ. ಶ್ರೀಘ್ರವೇ ಪರಿಕರ ವಿತರಣೆಗೆ ಕ್ರಮವಹಿಸಲಾಗುವುದು. ಅದೇ ರೀತಿ 1980ರ ಸುಮಾರಿಗೆ ರಾಜ್ಯದಲ್ಲಿ ಸುಮಾರು 10 ಕೋಟಿ ಮೊಟ್ಟೆಗಳನ್ನು ನಿರ್ವಹಣೆ ಮಾಡಲು ಬೇಕಾದ ಸೌಲಭ್ಯಗಳನ್ನು ಸ್ಥಾಪಿಸಲಾಗಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಚಾಕಿ ಸಿದ್ದಪಡಿಸಿ ರೈತರಿಗೆ ಕಡಿಮೆ ದರದಲ್ಲಿ ನೀಡುವುದಾದರೆ ಖಂಡಿತವಾಗಿ ಕೊಡಲು ಸಿದ್ಧರಿದ್ದೇವೆ ಎಂದು ಇಲಾಖೆ ಆಯುಕ್ತ ರಾಜೇಶ್​ ಗೌಡ ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚೇತನ್​, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಡಾ. ಶಮಾರ್ ಇಕ್ಬಾಲ್​, ಜಿಪಂ ಸಿಇಒ ದಿಗ್ವಿಜಯ್​ ಬೋಡ್ಕೆ, ಎಸಿ ಬಿನೋಯ್​ ಮುಂತಾದವರು ಇದ್ದರು.