ಮೈಸೂರು: ರಾಮಕೃಷ್ಣನಗರದಲ್ಲಿರುವ ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯಲ್ಲಿ ಜ.15 ರಂದು ಸಂಜೆ 6.30ಕ್ಕೆ ವೈದೇಹಿ ಅವರ ‘ನಾಯಿಮರಿ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಈ ನಾಟಕ ಜ.13ರಂದು ಸಂಜೆ 6ಕ್ಕೆ ಕಿರು ರಂಗಮಂದಿರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಸಂಚಲನ ಮಕ್ಕಳ ನಾಟಕೋತ್ಸವದಲ್ಲೂ ಪ್ರದರ್ಶನಗೊಳ್ಳಲಿದೆ.
ವೈದೇಹಿ ಅವರ ಮಕ್ಕಳ ನಾಟಕಗಳಲ್ಲಿ ಬಹಳ ವಿಶೇಷವಾದ ನಾಟಕ ‘ನಾಯಿಮರಿ’. ಮನುಷ್ಯ ಮತ್ತು ಪ್ರಾಣಿ ಜಗತ್ತಿನ ಸಂಬಂಧ ಮತ್ತು ಸಂಘರ್ಷ ಬಹಳ ಹಳೆಯದು. ಅಂತಹ ಒಂದು ಸಂಬಂಧದ ಕಥಾನಕ ಇದು. ಒಂದಾನೊಂದು ಊರಿನ ಸಣ್ಣ ತೋಟದ ಮನೆಯಲ್ಲಿ ಅಜ್ಜ, ಅಜ್ಜಿ ಮತ್ತು ಮೊಮ್ಮಗಳು ವಾಸವಿರುತ್ತಾರೆ. ತೋಟಕ್ಕೆ ಕಳ್ಳರ ಕಾಟ ಇರುವುದರಿಂದ ಒಂದು ನಾಯಿ ಮರಿಯನ್ನು ತಂದು ಸಾಕಿದರೆ ಉಪಟಳ ಕಡಿಮೆಯಾದೀತು ಎಂದು ಒಂದು ನಾಯಿಮರಿಯನ್ನೂ ತಂದು ಸಾಕಿಕೊಳ್ಳುತ್ತಾರೆ. ಆದರೆ ಕಳ್ಳರೋ ನಾಯಿಯನ್ನೇ ಕದಿಯುವ ಉಪಾಯ ಮಾಡುತ್ತಾರೆ.
ಹೀಗೆ ಪ್ರಾರಂಭವಾಗುವ ಕಥಾನಕ ನಂತರ ಬೇರೆ ಬೇರೆ ಮಜಲುಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಮಕ್ಕಳ ಮನಸ್ಸಿಗೆ, ಕಲ್ಪನೆಗೆ ಮುದ ನೀಡುವಂತಹ ಕಥೆ, ಪಾತ್ರಗಳು, ಸನ್ನಿವೇಶ, ಸಂಭಾಷಣೆ ಒಳಗೊಂಡಿರುವ ಈ ನಾಟಕವು ಸಂಪೂರ್ಣ ಮನರಂಜನೆಯಿಂದ ಕೂಡಿದ್ದು, ಸಂಬಂಧಗಳ ಬೆಲೆಯನ್ನು, ಮನುಷ್ಯನ ದುಷ್ಟತನವನ್ನು ಮೀರಿ ನಿಲ್ಲುವ ಪ್ರೀತಿಯ ಕಥೆಯನ್ನು ಹೇಳುತ್ತದೆ.