ಹುಲಿಯೂರುದುರ್ಗ: ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಪಿಎಸ್ಐ ನೇಮಕಾತಿ ಅಕ್ರಮದ ನಂಟು ತುಮಕೂರು ಜಿಲ್ಲೆಗೂ ತಟ್ಟಿದೆ. ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಪಡೆದಿದ್ದ ಸಿ.ಎಸ್.ನಾಗೇಶ್ಗೌಡ ಹೆಸರು ಕೂಡ ಚರ್ಚೆಯಾಗುತ್ತಿದೆ.
ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪ ಮಾಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಸಂಬಂಧಿ ನಾಗೇಶ್ಗೌಡ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚಿಕ್ಕಮಾವತ್ತೂರು ನಿವಾಸಿ.
ಕುಣಿಗಲ್ ತಾಲೂಕಿನ ಗಡಿಭಾಗದ ಗ್ರಾಮದ ನಿವಾಸಿ ನಾಗೇಶ್ಗೌಡ 2020ರಲ್ಲಿ ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಇಲಾಖೆ ಸೇರಿದ್ದು, ದಾವಣಗೆರೆ, ಬಾಗಲಕೋಟೆಗೆಯಲ್ಲಿ ಕೆಲಸ ಮಾಡಿದ್ದರು. ಪ್ರಸ್ತುತ ನೆಲಮಂಗಲ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗೇಶಗೌಡ, ಚಿಕ್ಕಮಾವತ್ತೂರಿನ ರೈತ ಸೋಬಗಯ್ಯ ಅವರ 5ನೇ ಮಗ.
ನಾಗೇಶ್ಗೌಡ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ಇತ್ತೀಚೆಗೆ ಹುಟ್ಟೂರಿನ ಜತೆ ಅಷ್ಟೊಂದು ಸಂಪರ್ಕ ಇರಲಿಲ್ಲ ಎನ್ನಲಾಗಿದೆ. ಆದರೆ, ಊರಿನ ಗೆಳೆಯರಿಗೆ ನಾನು ಶೀಘ್ರದಲ್ಲಿ ಪಿಎಸ್ಐ ಆಗುತ್ತೇನೆ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಅಕ್ರಮದ ಅರೋಪ ಕೇಳಿ ಬಂದ ನಂತರ ನಾಗೇಶ್ಗೌಡರ ಮೊಬೈಲ್ ಸ್ಥಗಿತಗೊಂಡಿದ್ದು, ತನಿಖೆಗಾಗಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ನಾಗೇಶ್ಗೌಡ ತಂದೆ, ತಾಯಿ ಚಿಕ್ಕಮಾವತ್ತೂರು ಗ್ರಾಮದಲ್ಲಿ ವಾಸವಿದ್ದು, ಸಿಐಡಿ ಪೊಲೀಸರು ಈಗಾಗಲೇ ಗ್ರಾಮಕ್ಕೆ ಭೇಟಿ ನೀಡಿ ಹುಡಕಾಟ ನಡೆಸಿದ್ದಾರೆ.
ಇತ್ತ ಮಗನ ಮೇಲಿನ ಆರೋಪ ಕುರಿತು ಪ್ರತಿಕ್ರಿಯಿಸಿದ ನಾಗೇಶ್ಗೌಡರ ತಂದೆ ಸೋಬಗಯ್ಯ, ನಮಗೆ ಸಚಿವ ಅಶ್ವಥ್ನಾರಾಯಣ್ ಗೊತ್ತೇ ಇಲ್ಲ, ಸಿದ್ದರಾಮಯ್ಯ ರಾಜಕೀಯಕ್ಕಾಗಿ ಈ ರೀತಿ ಮಾತನಾಡಿದ್ದಾರೆ. ಮೊದಲು ಮಾಗಡಿಯವರು ಅಂದ್ರು, ಈಗ ನನ್ನ ಮಗನನ್ನು ಹಿಡ್ಕೊಂಡಿದಾರೆ. ನಾವು ದುಡ್ಡ ಕೊಟ್ಟಿರುವ ಬಗ್ಗೆ ಸಾಕ್ಷ್ಯ ನೀಡಲಿ, ಅದು ಬಿಟ್ಟು ಬಡವರ ಮಗನನ್ನು ಬಲಿಪಶು ಮಾಡುವುದನ್ನು ನಿಲ್ಲಿಸಲಿ. ರೈತರಾದ ನಾವು ಎಲ್ಲಿಂದ 80-90 ಲಕ್ಷ ರೂಪಾಯಿ ತುರುವುದು? ಬಡವರ ಮೇಲೆ ರಾಜಕೀಯ ಮಾಡಬಾರದು ಎಂದು ಕಿಡಿಕಾರಿದರು.