ಜಿಲ್ಲೆ

ಈ ಬಾರಿ ಸಮೃದ್ಧ ಮೀನುಗಾರಿಕೆ: ಲಾಭದ ನಿರೀಕ್ಷೆಯಲ್ಲಿ ರೈತರು

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ
ಕಳೆದ ವರ್ಷದ ಮಾದರಿಯಲ್ಲಿ ಈ ಬಾರಿಯೂ ಉತ್ತಮ ಮಳೆ ಬೀಳುತ್ತಿರುವುದರಿಂದ ಬಹುತೇಕ ಕೆರೆಗಳು, ಜಲಾಶಯಗಳಲ್ಲ ನೀರು ತುಂಬಿ ಹರಿಯುತ್ತಿದ್ದು ಮೀನುಗಾರಿಕೆಯಲ್ಲಿ ಒಳ್ಳೆಯ ಲಾಭದ ನಿರೀಕ್ಷೆ ಮೂಡಿದೆ.


ವರುಣರಾಯನ ಕೃಪೆಯು ಮೀನುಗಾರಿಕೆಗೂ ಅನುಕೂಲಕರವಾಗಿದೆ. ಸಮೃದ್ಧ ಮೀನು ಉತ್ಪಾದನೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿರುವುದರಿಂದ ಮೀನುಗಾರರಲ್ಲಿ ಸಹಜವಾಗಿ ಆದಾಯದ ಲೆಕ್ಕಾಚಾರ ಜೋರಾಗಿದೆ. ಜಿಲ್ಲೆಯಲ್ಲಿ ಸರಾಸರಿ 80 ಲಕ್ಷ ಮೀನು ಮರಿ ಬಿತ್ತನೆ ಗುರಿ ಹೊಂದಿದ್ದು ಇದು ಪೂರ್ಣಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆಗಾಗ ಬರ, ದಿನೇದಿನೆ ಅಂತರ್ಜಲ ಮಟ್ಟ ಕುಸಿತ ಕಾಣುತ್ತಿರುವ ಜಿಲ್ಲೆಯಲ್ಲಿ ಕೆರೆಗಳು ಪ್ರಮುಖ ನೀರಾವರಿ ಮೂಲ. ಇವುಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣದಿಂದ ಕೊಳವೆ ಬಾವಿಗಳ ಸಫಲ ಮತ್ತು ವೈಫಲ್ಯ ನಿರ್ಧಾರವಾಗುತ್ತದೆ. ಹಾಗೆಯೇ ಮೀನುಗಾರಿಕೆಯಲ್ಲಿ ಲಾಭ ನಷ್ಟ ಕೆರೆಗಳನ್ನೇ ಹೆಚ್ಚಿಗೆ ಆವಲಂಬಿಸಿದೆ.


ಕಳೆದ ಎರಡು ವರ್ಷಗಳ ಹಿಂದೆ ನಿರೀಕ್ಷೆಗೆ ಅನುಗುಣವಾಗಿ ಮಳೆ ಬೀಳದೇ ಮೀನುಗಾರಿಕೆಯು ಆರಕ್ಕೇರದ, ಮೂರಕ್ಕಿಳಿಯದ ಪರಿಸ್ಥಿತಿಯಲ್ಲಿತ್ತು. ದೊಡ್ಡ ಕೆರೆಗಳನ್ನು ಹೊರತುಪಡಿಸಿ ಸಣ್ಣ ಕೆರೆಗಳಲ್ಲಿ ಅಷ್ಟಾಗಿ ಲಾಭ ಸಿಕ್ಕಿರಲಿಲ್ಲ. ಆದರೆ, ಈ ಸಾಲಿನಲ್ಲಿ ಧಾರಾಕಾರ ಮಳೆ ಬಿದ್ದಿದೆ. ಜಿಲ್ಲೆಯ 44 ಕೆರೆಗಳ ಪೈಕಿ 43 ಕೆರೆಗಳಿಗೆ ಎಚ್.ಎನ್.ವ್ಯಾಲಿಯ ತ್ಯಾಜ್ಯ ಸಂಸ್ಕರಿಸಿದ ನೀರನ್ನು ತುಂಬಿಸಿದ್ದು ಇದರ ಜತೆಗೆ ಮಳೆಯಿಂದ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ಹಲವು ಜಲಾಶಯಗಳಲ್ಲಿ ಹೆಚ್ಚಿಗೆ ನೀರು ಸಂಗ್ರಹವಾಗಿದೆ. ಮುಂಬರುವ ದಿನಗಳಲ್ಲೂ ಉತ್ತಮ ಮಳೆಯಾದರೆ ಮೀನು ಬಿತ್ತನೆ ಚಟುವಟಿಕೆ ಚುರುಕುಗೊಳ್ಳಲಿದೆ.

ಅಲ್ಲಲ್ಲಿ ಮೀನು ಹಿಡಿತ ಹೆಚ್ಚಳ: ಕೆರೆಗಳು ಕೋಡಿ ತುಂಬಿ. ನೀರು ಹರಿಯುತ್ತಿರುವುದು ಮೀನು ಹಿಡಿಯುವರಿಗೆ ಅನುಕೂಲವಾಗಿದೆ. ಕಂದವಾರ ಕೆರೆ, ಜಕ್ಕಲಮಡಗು ಜಲಾಶಯ, ಅಮಾನಿ ಭೈರಸಾಗರ, ವಾಟದಹೊಸಹಳ್ಳಿ ಕೆರೆ ಸೇರಿ ಹಲವೆಡೆ ಬಲೆಗಳನ್ನು ಹಾಕಿ, ನೀರಿನಲ್ಲಿ ಮೀನು ಹಿಡಿಯುತ್ತಿದ್ದು ದೊಡ್ಡ ದೊಡ್ಡ ಗಾತ್ರದ ಮೀನುಗಳು ಸಿಗುತ್ತಿವೆ. ತಾಜಾ ಮಾಂಸದ ಲೆಕ್ಕಾಚಾರದಲ್ಲಿ ಸುತ್ತಲಿನ ಜನರು ಕೆರೆಗಳ ಬಳಿ ತೆರಳಿ, ದುಬಾರಿ ಬೆಲೆ ತೆತ್ತು ಮೀನು ಖರೀದಿಸುತ್ತಿದ್ದಾರೆ. ಮತ್ತೊಂದೆಡೆ ಜಿಲ್ಲೆಯಲ್ಲಿನ ಕೆಲ ರೈತರು ಕೃಷಿ ಹೊಂಡಗಳನ್ನು ಮೀನುಗಾರಿಕೆಯ ಮೂಲಕ ಒಳ್ಳೆಯ ಲಾಭ ಗಳಿಸುತ್ತಿದ್ದಾರೆ.

ಉತ್ತಮ ಲಾಭದ ನಿರೀಕ್ಷೆ: ಜಿಲ್ಲೆಯಲ್ಲಿ ಮೀನುಗಾರಿಕಾ ಇಲಾಖೆಯ ವ್ಯಾಪ್ತಿಯಲ್ಲಿ 214 ಮತ್ತು ಗ್ರಾಪಂ ವ್ಯಾಪ್ತಿಯ 1,341 ಕೆರೆಗಳಿದ್ದು, ಜಲ ವಿಸ್ತೀರ್ಣ 20,808. ಇನ್ನು ಈ ಭಾಗದಲ್ಲಿ 11,300 ಮಂದಿ ಮೀನು ಸಾಕಾಣೆದಾರರು ಮತ್ತು 4 ಮೀನುಗಾರರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 606 ಮಂದಿ ಸದಸ್ಯರಿದ್ದಾರೆ.
ಉತ್ತಮ ಮಳೆ ಮತ್ತು ಜಲ ಸಮೃದ್ಧಿ ಹಿನ್ನೆಲೆಯಲ್ಲಿ ಮೀನುಗಾರಿಕೆಯಲ್ಲಿ ಒಳ್ಳೆಯ ಲಾಭ ಸಿಗುವ ನಿರೀಕ್ಷೆ ಮೂಡಿದ್ದು, ಗುತ್ತಿಗೆದಾರರು ಫುಲ್ ಖುಷಿಯಲ್ಲಿದ್ದಾರೆ. ಕಳೆದ 2019ರಲ್ಲಿ 122 ಕೆರೆಗಳಲ್ಲಿ ಹರಾಜಿನಿಂದ 35 ಲಕ್ಷ ರೂ., 2020ರಲ್ಲಿ 168 ಕೆರೆಗಳ ಹರಾಜಿನಿಂದ 39 ಲಕ್ಷ ರೂ., ಆದಾಯ, 2021ನೇ ಸಾಲಿನಲ್ಲಿ 170 ಕೆರೆಗಳ ವ್ಯಾಪ್ತಿಯಲ್ಲಿ 50 ಲಕ್ಷ ರೂ.ಗಳಿಗೂ ಹೆಚ್ಚಿನ ಆದಾಯ ಇಲಾಖೆಗೆ ಸಿಕ್ಕಿತ್ತು. ಈ ಬಾರಿ ವರುಣರಾಯ, ಉತ್ತಮ ವಾತಾವರಣ ಮತ್ತು ಮೀನುಗಾರಿಕೆಯ ಕೃಪೆಯು ಮತ್ತಷ್ಟು ಆದಾಯ ಹೆಚ್ಚಳದ ನಿರೀಕ್ಷೆ ಮೂಡಿದೆ.

ಧಾರಾಕಾರ ಮಳೆಗೆ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ. ವಿಲೇವಾರಿಯಾಗಿದ್ದ ಮೀನು ಮರಿಗಳು ದೊಡ್ಡ ಗಾತ್ರದಲ್ಲಿ ಬೆಳೆದಿದ್ದು ಹೆಚ್ಚಿನ ತೂಕದ ಮಾಂಸದಿಂದ ಒಳ್ಳೆಯ ಲಾಭ ಸಿಗುವ ನಿರೀಕ್ಷೆ ಮೂಡಿದೆ.
ಸೀನಪ್ಪ, ಗುತ್ತಿಗೆದಾರ